Thursday, October 23, 2025

Latest Posts

ಪಡಿತರಿಗೂ ಕನ್ನ 49 ಟನ್ ಅಕ್ಕಿ ಸೀಜ್ – ಮಾಫಿಯಾ ಶೈಲಿ ಪಡಿತರ ಅಕ್ಕಿ ಕಳವು!

- Advertisement -

ರಾಜ್ಯ ಸರ್ಕಾರ ಬಡವರ ಹೊಟ್ಟೆ ತುಂಬಲು ಆರಂಭಿಸಿರುವ ‘ಅನ್ನಭಾಗ್ಯ’ ಯೋಜನೆಗೆ ಈಗ ಕನ್ನ ಬಿದ್ದಿದೆ. ಈ ರಾತ್ರಿಯಲ್ಲಿ, ಭಾರೀ ಪ್ರಮಾಣದಲ್ಲಿ ಬರೋಬ್ಬರಿ 49 ಟನ್ ಪಡಿತರ ಅಕ್ಕಿ, ಅಕ್ರಮವಾಗಿ ಸಾಗಾಟವಾಗುತ್ತಿರುವ ವೇಳೆ ರೇಡ್ ನಡೆಸಿದ ಪೊಲೀಸರು ಎರಡು ಲಾರಿ ಮತ್ತು ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡಜನರಿಗಾಗಿ ಅನ್ನಭಾಗ್ಯ ಯೋಜನೆ ರೂಪಿಸಿ, ತಿಂಗಳಿಗೆ ನಿಗದಿತ ಪ್ರಮಾಣದಲ್ಲಿ ಪಡಿತರ ಅಕ್ಕಿ ನೀಡುತ್ತಿವೆ. ಈ ಯೋಜನೆಯ ಗುರಿ, ರಾಜ್ಯದ ಯಾವುದೇ ನಾಗರಿಕನು ಹಸಿವಿನಿಂದ ಬಳಗದಂತೆ ನೋಡಿಕೊಳ್ಳುವುದು. ಆದರೆ, ಈ ಯೋಜನೆಗೆ ಕಣ್ಣು ಹಾಕಿರುವವರು ಯಾರೋ ಸಾಮಾನ್ಯ ಕ್ರಿಮಿನಲ್‌ಗಳಲ್ಲ. ಇದು ಡಾನ್ ಮಾಫಿಯಾ ಶೈಲಿಯ ಪಡಿತರ ಅಕ್ಕಿ ಕಳ್ಳತನ.

ಹಾವೇರಿ ಜಿಲ್ಲೆಯಿಂದ ಹುಬ್ಬಳ್ಳಿಯತ್ತ ಸಾಗಿಸುತ್ತಿದ್ದ 49 ಟನ್ ಪಡಿತರ ಅಕ್ಕಿಯನ್ನು ಎರಡು ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು‌. ಸೂಕ್ತ ಮಾಹಿತಿ ಮೇರೆಗೆ ಬೆಂಡಿಗೇರಿ ಪೊಲೀಸರು ರೇಡ್ ಮಾಡಿದ್ದಾರೆ. ಎರಡು ಲಾರಿ ಮತ್ತು ನಾಲ್ಕು ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. ರಾತ್ರಿ ಗೋಡಾನ್‌ಗೆ ಸೇರುವ ಮೊದಲು ಎಲ್ಲವೂ ಯೋಜಿತ, ಪ್ರಿಪ್ಲಾನ್‌ಡ್‌ ಆಗಿತ್ತು.

ಪಡಿತರದಾರರಿಗೆ ಹಣದ ಆಮಿಷ ತೋರಿಸಿ ಅವರಿಗೆ ಸಿಗಬೇಕಾದ ಅಕ್ಕಿಯನ್ನು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಾರೆ. ನಂತರ, ಅದನ್ನು ಪಾಲಿಶ್ ಮಾಡಿ, ಬ್ರ್ಯಾಂಡ್‌ ಪ್ಯಾಕಿಂಗ್ ಮಾಡುತ್ತಾರೆ. ಕೊನೆಗೆ, ಅಧಿಕ ದರದೊಂದಿಗೆ ವ್ಯಾಪಾರ ಮಾರುಕಟ್ಟೆಗೆ ಕಳುಹಿಸುತ್ತಿದ್ದರು.

ಪೋಲೀಸರು ಸದ್ಯದಲ್ಲೇ ಪೂರ್ವದಾಖಲೆ ಪರಿಶೀಲನೆ, ಲಾರಿ ಮಾಲೀಕರ ಮಾಹಿತಿ, ಮತ್ತು ಅಕ್ಕಿ ಸಾಗಾಟದ ದಾಖಲೆಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ.

ಈ ಕೃತ್ಯವು ಶ್ರೇಣಿಬದ್ಧವಾದ ಕ್ರೈಂ ಆಗಿದ್ದು, ಹಿನ್ನಲೆಯಲ್ಲಿ ಮಾಫಿಯಾ ಶೈಲಿಯ ಸಂಚು ಇರುವ ಸಾಧ್ಯತೆ ಇದೆ. ಹಾವೇರಿ, ದಾವಣಗೆರೆ, ಗದಗ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಿಂದ ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಮಾಹಿತಿ ಈಗ ಪೊಲೀಸ್ ಇಲಾಖೆಗೆ ಲಭ್ಯವಾಗಿದೆ. ಅಕ್ಕಿ ಕಿಂಗ್ ಪಿನ್‌ಗಳು, ಪುಟ್ಟ ಪುಟ್ಟ ಡೀಲರ್‌ಗಳಿಂದ ಹಿಡಿದು, ದೊಡ್ಡ ಸಾಗಣೆದಾರರ ತನಕ ಎಲ್ಲರೂ ಈ ದಂಧೆಯಲ್ಲಿ ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss