ಗೊಬ್ಬರ ಇಲ್ಲದೇ ರೈತರು ಪರದಾಡ್ತಿರೋ ಸಂದರ್ಭದಲ್ಲಿ, ಸರ್ಕಾರದ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆಯಾಗಿದೆ. ನಂಜನಗೂಡಿನ ಗೋದಾಮಿನಿಂದ ಗೊಬ್ಬರ ಸಾಗಿಸಲಾಗುತ್ತಿದ್ದ ಘಟನೆ ಇದೀಗ ರಾಜ್ಯದ ರೈತರಲ್ಲಿ ಆಕ್ರೋಶ ಹುಟ್ಟಿಸಿದೆ.
ಸಿಎಂ ಸಿದ್ದರಾಮಯ್ಯನವರು ರೈತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ರೈತರಿಗೆ ಗೊಬ್ಬರವಿಲ್ಲ. ಗೊಬ್ಬರ ನೀಡಬೇಕು ಅಂತ ಹೇಳ್ತಿದ್ದಾರೆ. ಆದ್ರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ನಡೆದ ಈ ದಾಳಿಯು ಸದ್ಯ ರಾಜ್ಯ ಮಟ್ಟದ ಸುದ್ದಿಯಾಗಿ ಪರಿಣಮಿಸಿದೆ.
ರೈತರಿಗೆ ನೀಡಬೇಕಾದ ಗೊಬ್ಬರವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಲಾರಿಯೊಂದನ್ನು ಕೃಷಿ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಲಾರಿಯೊಂದರಲ್ಲಿ ಸುಮಾರು 330 ಚೀಲ ಅಂದರೆ ಸುಮಾರು 15 ಟನ್ ಯೂರಿಯಾ ಗೊಬ್ಬರವನ್ನು ಸಾಗಿಸಲಾಗುತ್ತಿತ್ತು. ಲಾರಿ ಚಾಲಕನನ್ನು ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದು, ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ರಾಜ್ಯದಲ್ಲಿ ಗೊಬ್ಬರದ ಕೊರತೆಯ ಕಾರಣದಿಂದಾಗಿ, ಸರ್ಕಾರದ ನಿಯಮಾನುಸಾರ ಅಂತರರಾಜ್ಯ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಗೊಬ್ಬರವನ್ನು ಕೇರಳಕ್ಕೆ ಸಾಗಿಸುತ್ತಿದ್ದ ಪ್ರಕರಣವು ಗಂಭೀರ ಚರ್ಚೆಗೆ ಕಾರಣವಾಗಿದೆ.
ತನಿಖೆಯಲ್ಲಿ, ಈ ಗೊಬ್ಬರವನ್ನು ನಂಜನಗೂಡಿನ ಸರ್ಕಾರಿ ಗೋದಾಮಿನಿಂದ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ. ಘಟನೆಯ ಸಂಬಂಧಪಟ್ಟಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ತನಿಖೆ ಆರಂಭಿಸಲಾಗಿದೆ.
ಈ ಮಧ್ಯೆ ರೈತ ಸಂಘಗಳ ಪ್ರತಿಕ್ರಿಯೆಯೂ ಹೊರಬಿದ್ದಿದ್ದು, ರಾಜ್ಯಕ್ಕೆ ಗೊಬ್ಬರ ಸಾಕಾಗದ ವೇಳೆ ಇಂತಹ ಅಕ್ರಮ ಸಾಗಾಟಗಳು ರೈತರ ಹಕ್ಕಿಗೆ ಧಕ್ಕೆ ಉಂಟುಮಾಡುತ್ತವೆ. ಗೋದಾಮಿನಲ್ಲಿ ಯಾವುದೇ ಅಧಿಕಾರಿಗಳ ಕೈವಾಡವಿದೆಯೇ ಎಂಬುದರ ಮೇಲೆ ಹೆಚ್ಚಿನ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.




