Belagavi News: ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ ಬಳಿಯ ಶಿವನ ಮೂರ್ತಿ ಎದುರು ಈ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿದೆ. ಅಪಘಾತದಲ್ಲಿ ಬೈಕ್ ಸವಾರ ಹಾಗೂ ಗೂಡ್ಸ್ ವಾಹನದ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಮದುರ್ಗ ಪಟ್ಟಣದ ನಿವಾಸಿ, ಶಿವಲಿಂಗ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ( 55), ಕಲಬುರಗಿ ಮೂಲದ ಗೂಡ್ಸ್ ವಾಹನದ ಚಾಲಕ ಅನಿಲ್ ರಮೇಶ ಬಿರಾದಾರ( 23) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಗೂಡ್ಸ್ ವಾಹನ ಚಾಲಕ ಅನಿಲ್ ಹಾವೇರಿಯಿಂದ ರಾಮದುರ್ಗಕ್ಕೆ ಬರುತ್ತಿದ್ದ . ಅರ್ಚಕರು ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಘಾಟಿನಲ್ಲಿ ಗೂಡ್ಸ್ ಗಾಡಿ, ಅರ್ಚಕರ ಸ್ಕೂಟಿಗೆ ಡಿಕ್ಕಿಯಾಗಿದೆ. ಈ ವೇಳೆ ಅರ್ಚಕರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಗೂಡ್ಸ್ ವಾಹನ ಪಲ್ಟಿ ಹಿನ್ನೆಲೆ ವಾಹನ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.