ಮನೆಯ ಬೀಗ ಮುರಿದು ವಕೀಲ ಜಗದೀಶ್ ಬಂಧನಕ್ಕೆ ಹರಸಾಹಸ!

ಸೌಜನ್ಯ ಪರ ಹೋರಾಟ ಮಾಡಿದ ಮಹೇಶ್ ತಿಮರೋಡಿ ಅವರ ಬಂಧನದ ಬಳಿಕ ಲಾಯರ್ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಮನೆಗೆ ಬೀಗ ಹಾಕಿಕೊಂಡು ಕೂತಿದ್ದ ವಕೀಲ ಜಗದೀಶ್ ಅವರನ್ನು ಕೊಡಿಗೇಹಳ್ಳಿ ಪೊಲೀಸರು ಶುಕ್ರವಾರವೇ ಬಂಧಿಸಿದ್ದಾರೆ. ಬಂಧನದ ವೇಳೆ ಮನೆಯ ಬೀಗ ಮುರಿದು ಪೊಲೀಸರು ಒಳ ಪ್ರವೇಶಿಸಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದ್ದ ಶವ ಹೂತ ಪ್ರಕರಣದ ಕುರಿತಾಗಿ ವಕೀಲ ಜಗದೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದರು. ಮೂರು ದಿನಗಳ ಹಿಂದೆ ಮಂಜುನಾಥ್ ಎಂಬುವವರು ಕೊಟ್ಟಿದ್ದ ದೂರಿನ ಆಧಾರದಲ್ಲಿ, ವಕೀಲ ಜಗದೀಶ್ ವಿರುದ್ಧ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಆರೋಪದಂತೆ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ವಕೀಲ ಜಗದೀಶ್ ನೋಟಿಸ್‌ಗೆ ಸ್ಪಂದಿಸದೆ ಮನೆಯೊಳಗೆ ಕುಳಿತಿದ್ದರು.

ಅವರ ಮನೆಗೆ ಬೀಗ ಹಾಕಲಾಗಿದ್ದರಿಂದ, ಪೊಲೀಸರು ಎರಡು ಮೂರು ಬಾರಿ ಬಾಗಿಲು ತೆರೆಸಿ ವಿಚಾರಣೆಗೆ ಬನ್ನಿ ಎಂದು ವಿನಂತಿಸಿದರೂ ಅವರು ಹೊರಬಂದಿಲ್ಲ. ಕೊನೆಗೆ ಬೀಗ ತಯಾರಕರ ಸಹಾಯದಿಂದ ಬೀಗ ಮುರಿದು ಮನೆಯೊಳಕ್ಕೆ ಪ್ರವೇಶಿಸಿ, ಜಗದೀಶ್ ಅವರನ್ನು ಬಂಧಿಸಲಾಯಿತು. ಈ ಸಂದರ್ಭ ಜಗದೀಶ್ ಪೊಲೀಸರ ಮೇಲೆ ಎಗರಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದರೂ, ಪೊಲೀಸರು ಬಲವಂತವಾಗಿ ಅವರನ್ನು ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆತಂದಿದ್ದಾರೆ.

ಎಫ್‌ಐಆರ್ ದಾಖಲಾಗಿದ್ದ ನಂತರ ತಮ್ಮ ಮನೆಗೆ ಬೀಗ ಹಾಕಿಕೊಂಡು ಕೂತಿದ್ದ ವಕೀಲ ಜಗದೀಶ್ ಇದೀಗ ಪೊಲೀಸರ ವಶದಲ್ಲಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author