Hubli News: ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಅವರನ್ನು ತಕ್ಷಣ ವಜಾಗೊಳಿಸಿ, ನಿರ್ಮಿತಿ ಕೇಂದ್ರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಎಂದು ಸಮತಾ ಸೇನಾ ಕರ್ನಾಟಕ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ 15 ದಿನಗಳ ಗಡುವು ನೀಡಲಾಗಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮತಾ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಅವರ ನೇಮಕಾತಿಯಲ್ಲೇ ಗಂಭೀರ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ನೇಮಕಾತಿ ವೇಳೆ ಯಾವುದೇ ಸಾರ್ವಜನಿಕ ಪ್ರಕಟಣೆ ಹೊರಡಿಸಿಲ್ಲ, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ ಹಾಗೂ ನಿಯಮಾನುಸಾರ ಆಯ್ಕೆ ಪ್ರಕ್ರಿಯೆಯನ್ನೂ ನಡೆಸಿಲ್ಲ ಎಂದು ಉಪವಿಭಾಗಾಧಿಕಾರಿಗಳ ತನಿಖಾ ವರದಿಯಲ್ಲೇ ಉಲ್ಲೇಖವಾಗಿದೆ. ವರದಿ ಸಲ್ಲಿಕೆಯಾಗಿ ಹಲವು ವರ್ಷಗಳಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅಲ್ಲದೇ, ನಿರ್ಮಿತಿ ಕೇಂದ್ರದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ, ಜಿಎಸ್‌ಟಿ ಹಾಗೂ ಲೇಬರ್ ಸೆಸ್ ವಂಚನೆ ಸೇರಿದಂತೆ ಹಲವು ಅಕ್ರಮಗಳು ನಡೆದಿದ್ದು, ಈ ಎಲ್ಲ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
15 ದಿನಗಳೊಳಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.




