ರಾಮನಗರ ರಾಜಕೀಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಇತ್ತೀಚೆಗೆ ಕಾರ್ಯಕರ್ತರ ಸಭೆಯಲ್ಲಿ ಬಿರುಸಿನ ಹೇಳಿಕೆ ನೀಡಿದ್ದಾರೆ. ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಗರಂ ಆಗಿದ್ದಾರೆ.
ಹಾರೋಹಳ್ಳಿಯ ಅಂಚಿಬಾರೆಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ನಿಖಿಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಶಾಸಕರಿದ್ದಾಗ ದ್ವೇಷದ ರಾಜಕಾರಣ ಇರಲಿಲ್ಲ. ಆದರೆ ಈಗ ಹೆಚ್ಚಾಗಿದೆ. ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಜನತೆ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ಲೋಪಗಳಿದ್ದವು. ಆದರೆ ಒಳಸಂಚು ರೂಪಿಸಿ ಸೋಲಿಸಿದರು. ಆದರೂ ನಾವು ಬೆನ್ನು ಕೊಡುವುದಿಲ್ಲ. ಇಂದಿನಿಂದಲೇ ಕಾರ್ಯಕರ್ತರೊಂದಿಗೆ ಸಂಘಟನೆ ಬಲಪಡಿಸುತ್ತೇವೆ. ಕಾರ್ಯಕರ್ತರ ಭಾವನೆಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆ.
ನನ್ನ ಮುಂದೆ ಬೆಟ್ಟದಷ್ಟು ಗುರಿಯಿದೆ. 2028ಕ್ಕೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ತಯಾರಿ ಆರಂಭಿಸಬೇಕು. ರಾಜ್ಯ ಸುತ್ತುವ ಜವಾಬ್ದಾರಿ ನನಗೆ ಇದೆ. ಆದರೆ ಇದು ಒಬ್ಬರ ಕೆಲಸವಲ್ಲ, ಇದು ಸಾಮೂಹಿಕ ಜವಾಬ್ದಾರಿ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ