ಬಿಜೆಪಿ ತನ್ನ ಮುಂದಿನ ರಾಷ್ಟ್ರಾಧ್ಯಕ್ಷರ ಆಯ್ಕೆ ಕಾರ್ಯಕ್ಕೆ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ರಾಷ್ಟ್ರೀಯ ನಾಯತ್ವದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಗುಜರಾತ್‌ನ ಹಿರಿಯ ನಾಯಕ ಪಾರ್ಶೋತ್ತಮ್ ರೂಪಾಲಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಂಬ ಹೆಸರಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳಾಗಿ ಗಮನ ಸೆಳೆಯುತ್ತಿವೆ.
ಮೂಲಗಳ ಪ್ರಕಾರ, ಫಡ್ನವೀಸ್ ಅವರನ್ನು ಬಿಹಾರ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಅವರ ರಾಜಕೀಯ ಭವಿಷ್ಯದ ಕುರಿತು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಅವರನ್ನು ರಾಷ್ಟ್ರೀಯ ಮಟ್ಟದ ನಾಯಕತ್ವಕ್ಕೆ, ವಿಶೇಷವಾಗಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣನೆಯಲ್ಲಿ ಇರಿಸಲಾಗಿದೆಯೆಂದು ತಿಳಿದುಬಂದಿದೆ.
ಇನ್ನು ಗುಜರಾತ್‌ನ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಪಾರ್ಶೋತ್ತಮ್ ಖೋಡಾಭಾಯಿ ರೂಪಾಲಾ ಅವರ ಹೆಸರು ಪಕ್ಷದ ಪ್ರಮುಖ ನಾಯಕರ ಗಮನ ಸೆಳೆದಿದೆ. ಆರ್‌ಎಸ್‌ಎಸ್‌ನಿಂದಲೂ ಅವರಿಗೆ ಬೆಂಬಲವಿರುವುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯರಾಗಿ ಗುರುತಿಸಿಕೊಂಡ ರೂಪಾಲಾ, ಕಳೆದ ಲೋಕಸಭಾ ಚುನಾವಣೆಯ ವೇಳೆ ತಮ್ಮ ಕೆಲವು ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾದರೂ, ಸಂಘ ಪರಿವಾರದಲ್ಲಿ ತಮ್ಮ ನಿಷ್ಠೆ ಮತ್ತು ಭದ್ರತೆಗಾಗಿ ಮೆಚ್ಚುಗೆ ಗಳಿಸಿದ್ದಾರೆ.
ಈ ಪೈಪೋಟಿಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಪ್ರಮುಖ ಸ್ಪರ್ಧಿಯಾಗಿ ಗುರುತಿಸಲಾಗಿದೆ. ಅವರ ತಂದೆ ಡಾ. ದೇಬೇಂದ್ರ ಪ್ರಧಾನ್, ಆರ್‌ಎಸ್‌ಎಸ್‌ನ ಆಜೀವ ಸದಸ್ಯರಾಗಿದ್ದು, 1980ರಲ್ಲಿ ಬಿಜೆಪಿಗೆ ಸೇರಿದ್ದರು.
ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸುವ ಮೊದಲು, ಪಕ್ಷದ 37 ರಾಜ್ಯ ಘಟಕಗಳ ಕನಿಷ್ಠ 50% ಘಟಕಗಳು ಚುನಾವಣಾ ಪ್ರಕ್ರಿಯೆಗೆ ಸಿದ್ಧರಾಗಬೇಕಿದೆ. ಈ ಬಗ್ಗೆ ಸಮಾಲೋಚನೆಗಳು ಪ್ರಾರಂಭವಾಗಿದ್ದು, ಬಹುಮತದ ಬೆಂಬಲ ಹೊಂದಿದ ಒಮ್ಮತದ ಅಭ್ಯರ್ಥಿಯನ್ನು ಆರ್‌ಎಸ್‌ಎಸ್ ಮತ್ತು ಪಕ್ಷದ ನಾಯತ್ವದೊಂದಿಗೆ ಸಮನ್ವಯದ ಮೂಲಕ ಆಯ್ಕೆ ಮಾಡುವ ದೃಷ್ಟಿಯಿಂದ ಮುಂದುವರೆಯುತ್ತಿದೆ.
ಪಕ್ಷದ ಒಳಾಂಗಣ ರಾಜಕಾರಣದಲ್ಲಿ ಬದಲಾವಣೆಗಳ ಈ ಹಂತದಲ್ಲಿ ಫಡ್ನವೀಸ್, ರೂಪಾಲಾ ಹಾಗೂ ಪ್ರಧಾನ್ ಯಾರಿಗಾಗಲಿದೆ ರಾಷ್ಟ್ರಾಧ್ಯಕ್ಷ ಹುದ್ದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.