Monday, October 6, 2025

Latest Posts

BJD–BRS ದೂರ, ದೂರ NDA ಗೆಲುವಿಗೆ ದೊಡ್ಡ ವಿಘ್ನ?

- Advertisement -

ಉಪರಾಷ್ಟ್ರಪತಿ ಚುನಾವಣೆಯ ಅಖಾಡ ರಂಗೇರಿದೆ. ಬಿಜು ಜನತಾ ದಳ (ಬಿಜೆಡಿ) ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿವೆ. ಇದರಿಂದ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು INDIA ಬಣದ ಅಭ್ಯರ್ಥಿ, ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್‌ ರೆಡ್ಡಿ ನಡುವಿನ ಪೈಪೋಟಿ ಇನ್ನಷ್ಟು ಕುತೂಹಲ ಹುಟ್ಟಿಸಿದೆ.

ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರ ನೇತೃತ್ವದ ಬಿಜೆಡಿ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಒಕ್ಕೂಟ ಎರಡರ ಮೇಲೂ ಸಮಾನ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ. ಈ ಕಾರಣದಿಂದಲೇ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಜೆಪಿ ಸಂಸದ ಸಸ್ಮಿತ್‌ ಪಾತ್ರಾ ತಿಳಿಸಿದ್ದಾರೆ.

ಈ ನಿರ್ಧಾರಕ್ಕೆ ಒಡಿಶಾ ಕಾಂಗ್ರೆಸ್‌ ಅಧ್ಯಕ್ಷ ಭಕ್ತ ಚರಣ್‌ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನದಿಂದ ದೂರ ಉಳಿಯುವ ಮೂಲಕ ಬಿಜೆಡಿ ಅಪ್ರತ್ಯಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದಂತಾಗಿದೆ ಎಂದು ಅವರು ಆರೋಪಿಸಿದರು. ಮತದಾನದಲ್ಲಿ ಪಾಲ್ಗೊಂಡಿದ್ದರೆ ಬಿಜೆಪಿ ವಿರುದ್ಧ ತಮ್ಮ ನಿಲುವನ್ನು ಸಾಬೀತುಪಡಿಸಬಹುದಾಗಿತ್ತು ಎಂದೂ ಅವರು ಅಭಿಪ್ರಾಯಪಟ್ಟರು.

ಬಿಜೆಡಿಯ ನಂತರ ಬಿಆರ್‌ಎಸ್ ಕೂಡ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿದೆ. ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮರಾವ್‌ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಯೂರಿಯಾ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಉಪರಾಷ್ಟ್ರಪತಿ ಚುನಾವಣೆಯಲ್ಲಿ NOTA ಆಯ್ಕೆ ಲಭ್ಯವಿದ್ದರೆ ಅದನ್ನು ಬಳಸುತ್ತಿದ್ದೇವೆ ಎಂದರು.

ಇದೇ ವೇಳೆ, ಎನ್‌ಡಿಎ ಸಂಸದರೊಂದಿಗೆ ಸಮಾಲೋಚಿಸಿ ಮತದಾನಕ್ಕೆ ತರುವ ಜವಾಬ್ದಾರಿ ಕೇಂದ್ರ ಮಂತ್ರಿಗಳಿಗೆ ಹಂಚಲಾಗಿದೆ. ದಕ್ಷಿಣ ಭಾರತದ ಸಂಸದರ ಹೊಣೆ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ನೀಡಲಾಗಿದ್ದು, ಇತರ ರಾಜ್ಯಗಳ ಸಂಸದರ ಹೊಣೆ ತಮ್ಮ ರಾಜ್ಯದ ಸಂಬಂಧಿತ ಸಚಿವರಿಗೆ ವಹಿಸಲಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss