ಪಕ್ಷದ ಸಂಘಟನೆಯನ್ನು ಬಲಪಡಿಸುವ ಮತ್ತು 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಯಾರಿ ಆರಂಭಿಸಿದೆ. ಹಾಗಾಗಿ ಗುಜರಾತ್‌ನ ಜುನಾಗಢದಲ್ಲಿ ಬೃಹತ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿತು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಂದು ಇಬ್ಬರು ಗುಜರಾತಿಗಳು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಇಂದು ಮತ್ತಿಬ್ಬರು ಗುಜರಾತಿಗಳು ಜನರನ್ನು ವಿಭಜಿಸುತ್ತಿದ್ದಾರೆ. ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು. ಮಹಾತ್ಮಾ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಿದರೆ ಇಂದಿನ ನಾಯಕರು ಆ ಪರಂಪರೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರದಲ್ಲಿರುವವರು ಸಾಂವಿಧಾನಿಕ ಸಂಸ್ಥೆಗಳನ್ನು ನಾಶಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದನ್ನು ತಡೆಯುವುದು ಮತ್ತು ಸಂವಿಧಾನವನ್ನು ಉಳಿಸುವುದು ಕಾಂಗ್ರೆಸ್‌ನ ಆದ್ಯ ಕರ್ತವ್ಯ ಎಂದು ಖರ್ಗೆ ತೀವ್ರವಾಗಿ ತಿಳಿಸಿದ್ದಾರೆ.
ಖರ್ಗೆ ಅವರು ಜುನಾಗಢ ಶಿಬಿರವನ್ನು “2027ರ ವಿಧಾನಸಭಾ ಚುನಾವಣೆಯ ಲಾಂಚ್‌ಪ್ಯಾಡ್” ಎಂದು ಘೋಷಿಸಿದರು. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದ ಅವರು, ಇದು ಕೇವಲ ಶಿಬಿರವಲ್ಲ, ನಾವು ಗುಜರಾತ್‌ಗೆ ಮರಳುವ ಪ್ರಯತ್ನದ ಪ್ರಾರಂಭ” ಎಂದು ಹೇಳಿದರು.
ತರಬೇತಿ ಶಿಬಿರದ ವಿಶೇಷತೆಗಳನ್ನ ನೋಡೋದಾದ್ರೆ ಶಿಬಿರವು ಸೆಪ್ಟೆಂಬರ್ 12 ರಿಂದ 19 ರವರೆಗೆ ಜುನಾಗಢದ ಪ್ರೇರಣಾಧಮ್ ನಲ್ಲಿ ನಡೆಯಲಿದೆ. ನೂತನ ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರಿಗೆ ಸಂಘಟನಾ ಕೌಶಲ್ಯ ಕುರಿತು ತರಬೇತಿ ನೀಡಲಿದೆ. ಸೆಪ್ಟೆಂಬರ್ 12 ಮತ್ತು 17 ರಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ವರದಿ : ಲಾವಣ್ಯ ಅನಿಗೋಳ




