ಕರ್ನಾಟಕದಲ್ಲಿ ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನವಾಗಿ ರಾಜ್ಯ ಲೋಕಾಯುಕ್ತ ಕಳೆದ ಎರಡು ವರ್ಷಗಳಲ್ಲಿ ತೀವ್ರ ಕ್ರಮಕೈಗೊಂಡಿದೆ. ಜನರ ದೂರಿನ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮೇಲೆ 218 ದಾಳಿಗಳು ನಡೆದಿದ್ದು, ಒಟ್ಟು 219 ಅಧಿಕಾರಿಗಳು ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ಈ ದಾಳಿಗಳು 2023ರ ಜನವರಿ 1 ರಿಂದ 2025ರ ಜುಲೈ 31ರ ವರೆಗೆ ನಡೆದಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಆರ್ಥಿಕ, ಆಡಳಿತಾತ್ಮಕ ನಷ್ಟ ಉಂಟುಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದಾಯಕ್ಕಿಂತ ಮೀರಿದ ಆಸ್ತಿ, ಲಂಚದ ಬೇಡಿಕೆ, ಅಕ್ರಮ ಜಮೀನು ವರ್ಗಾವಣೆ ಮುಂತಾದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ.
ಸದ್ಯ ಹೆಚ್ಚು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಇಲಾಖೆಗಳು ಯಾವು ? ಯಾವ ಇಲಾಖೆಯಲ್ಲಿ ಎಷ್ಟು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಅನ್ನೋದನ್ನ ನೋಡ್ತಹೋಗೋಣ. ದೂರುಗಳ ಪ್ರಮಾಣ ಹಾಗೂ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ, ಈ ಇಲಾಖೆಗಳು ಹೆಚ್ಚು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿವೆ. ಅಷ್ಟು ಮಂದಿ ಆರೋಪವನ್ನ ಎದುರಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ 12 ಮಂದಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಲ್ಲಿ 3 ಮಂದಿ, ಕಂದಾಯ ಇಲಾಖೆಯಲ್ಲಿ 20 ಮಂದಿ, ನಗರಾಭಿವೃದ್ದಿ ಇಲಾಖೆಯಲ್ಲಿ 39 ಮಂದಿ, ಇಂಧನ ಇಲಾಖೆಯಲ್ಲಿ 17 ಮಂದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅದೇರೀತಿ ಹಣಕಾಸು ಇಲಾಖೆ – 1, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ – 36, ಶಿಕ್ಷಣ ಇಲಾಖೆ – 2, ಪರಿಸರ ಮತ್ತು ಅರಣ್ಯ – 11, ಜಲಸಂಪನ್ಮೂಲ ಇಲಾಖೆ – 7, ಸಾರಿಗೆ ಇಲಾಖೆ – 4, ಗೃಹ ಇಲಾಖೆ – 5, ಆಹಾರ ಮತ್ತು ನಾಗರಿಕ ಪೂರೈಕೆ – 3, ತೋಟಗಾರಿಕೆ ಇಲಾಖೆ – 2, ಕಾರ್ಮಿಕ ಇಲಾಖೆ – 2, ಸಮಾಜ ಕಲ್ಯಾಣ ಇಲಾಖೆ – 2, ಬೃಹತ್ ಕೈಗಾರಿಕೆ ಇಲಾಖೆ – 12, ಪಶುಸಂಗೋಪಣೆ ಇಲಾಖೆ – 5, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 1, ಕೃಷಿ ಇಲಾಖೆ – 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – 3, ಸಣ್ಣ ನೀರಾವರಿ ಇಲಾಖೆ – 5, ವಸತಿ ಇಲಾಖೆ – 8, ಕೌಶಲ್ಯಾಭಿವೃದ್ದಿ ಇಲಾಖೆ – 1.
ಹಾಗಾದ್ರೆ ಸದ್ಯದ ಸ್ಥಿತಿ ಏನು? ಅಂತ ಕೇಳಿದ್ರೆ… 218 ದಾಳಿಗಳಲ್ಲಿ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿವೆ. ಕೆಲವು ಪ್ರಕರಣಗಳಿಗೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಇನ್ನು ಕೆಲವು ಅಪೀಲು ಹಂತದಲ್ಲಿ ಇವೆ. ಆದರೆ ಇಲ್ಲಿವರೆಗೆ ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದಿಂದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಗಿಲ್ಲ. ಆದರೆ ಈ ಸಂಖ್ಯೆಗಳು ಮತ್ತು ಪ್ರಕರಣಗಳು ರಾಜ್ಯದಲ್ಲಿ ಭ್ರಷ್ಟಾಚಾರದ ಗಂಭೀರತೆಗೆ ಸ್ಪಷ್ಟ ದಾಖಲೆ ನೀಡುತ್ತವೆ.
ವರದಿ : ಲಾವಣ್ಯ ಅನಿಗೋಳ




