Hubli News: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿರುವ ನಡುವೆಯೇ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೇಟ್ಟಿಕೊಪ್ಪ ಗ್ರಾಮದಲ್ಲಿ ವಿಶಿಷ್ಟ ಆಚರಣೆ ನಡೆದಿದೆ. ಉತ್ತಮ ಮಳೆಯಾಗಲಿ, ರೈತರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಗಂಡು-ಹೆಣ್ಣು ಕಪ್ಪೆಗಳಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿ ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದು ಸಾಮಾನ್ಯ ಮದುವೆಯಲ್ಲ… ಇಲ್ಲಿ ನಾದಸ್ವರ, ಡೊಳ್ಳು, ಆರತಿ, ಅರಿಶಿಣ ಶಾಸ್ತ್ರ ಎಲ್ಲವೂ ಇದೆ. ಆದರೆ ಮದುವೆಯಾಗುತ್ತಿರುವವರು ಮಾತ್ರ ಗಂಡು-ಹೆಣ್ಣು ಕಪ್ಪೆಗಳು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೇಟ್ಟಿಕೊಪ್ಪ ಗ್ರಾಮದಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಪ್ರದಾಯದಂತೆ ಕಪ್ಪೆಗಳ ವಿವಾಹ ನೆರವೇರಿಸಿದರು.
ಗ್ರಾಮದ ಮಹಿಳೆಯರು ಕಪ್ಪೆಗಳಿಗೆ ಅರಿಶಿಣ-ಕುಂಕುಮ ಹಚ್ಚಿ ಆರತಿ ಬೆಳಗಿದರು. ಬಳಿಕ ಅರಿಶಿಣ ಶಾಸ್ತ್ರ, ಹಂದರ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ವಿವಿಧ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕಪ್ಪೆಗಳ ಮದುವೆ ಮಾಡಿದರು. ಗ್ರಾಮಸ್ಥರು ಹೊಸ ಜೋಡಿಯಂತೆ ಕಪ್ಪೆಗಳನ್ನು ಅಲಂಕರಿಸಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು.
ಕರಡಿ ಮಜಲು, ಡೊಳ್ಳು ಹಾಗೂ ಭಜನೆ ಮೇಳದೊಂದಿಗೆ ಕಪ್ಪೆಗಳ ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿತು. ನಂತರ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಕಪ್ಪೆಗಳಿಗೆ ಕಂಕಣ ಧಾರಣೆ ಹಾಗೂ ಮಾಂಗಲ್ಯ ಧಾರಣೆ ಮಾಡಿ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಭಾಗವಹಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ರೈತರಿಗೆ ಉತ್ತಮ ಬೆಳೆ ಬರಲಿ, ಕೆರೆ-ಕಟ್ಟೆಗಳು ತುಂಬಲಿ ಹಾಗೂ ಗ್ರಾಮದಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಮಳೆರಾಯನ ಕೃಪೆಗೆ ಮೊರೆ ಹೋದರು. ಪೂಜೆ ಬಳಿಕ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಒಟ್ಟಾರೆಯಾಗಿ, ವೈಜ್ಞಾನಿಕ ಯುಗದಲ್ಲೂ ಗ್ರಾಮೀಣ ಭಾಗದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಮಳೆಗಾಗಿ ಕಪ್ಪೆಗಳ ಮದುವೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ. ಮುಂಗಾರು ಮಳೆ ಉತ್ತಮವಾಗಿ ಸುರಿದು ರೈತರ ಸಂಕಷ್ಟ ನಿವಾರಣೆಯಾಗಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಕ್ಯಾಮೆರ ಮ್ಯಾನ್ ಹೇಮಂತ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




