ಬೆಂಗಳೂರಿನ ರಸ್ತೆ ಗುಂಡಿ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಚಾರ ರಾಜಕೀಯ ಹಾದಿ ಹಿಡಿದು ಟ್ವೀಟ್ ಮೂಲಕ ವಾಗ್ವಾದಗಳು ಜೋರಾಗೆ ನಡೆದಿದ್ದವು. ಇದೀಗ ಅಕ್ಟೋಬರ್ ೩೧ ರ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಗಡುವು ನೀಡಿದ್ದಾರೆ. ಜೊತೆಗೆ ರಸ್ತೆಗುಂಡಿ ಮುಚ್ಚಲು ಹೆಚ್ಚುವರಿ ೭೫೦ ಕೋಟಿ ರೂ. ಅನುದಾನ ಕೂಡುವುದಾಗಿ ಭರವಸೆ ನೀಡಿದ್ದಾರೆ. ಹೀಗೆಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ರಸ್ತೆಗಳ ಸುಧಾರಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕುರಿತು ಶನಿವಾರ ಸಿಎಂ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ತಾವು GBA ಅಧಿಕಾರಿಗಳ ಸಭೆ ಮಾಡಿದ್ದೇವೆ ಎಂದರು.
ನಮ್ಮ ಅಧಿಕಾರಿಗಳು ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ನಾವು ನಗರದಲ್ಲಿ 10 ಸಾವಿರ ರಸ್ತೆ ಗುಂಡಿ ಪತ್ತೆ ಮಾಡಿದ್ದೇವೆ. ಇವುಗಳನ್ನು ಸರಿಪಡಿಸದಿದ್ದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು. ಅಷ್ಟೆ ಅಲ್ಲದೆ ರಸ್ತೆ ಗುಂಡಿಗಳ ಪಟ್ಟಿ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೆ ಆದಷ್ಟು ಬೇಗ ಅದನ್ನು ಮುಚ್ಚಲಾಗುವುದು ಎಂದು ಹೇಳಿದರು.
ಈಗಿನ ಮಳೆಗಾಲ ಮುಕ್ತಾಯದ ನಂತರ ಪ್ರತ್ಯೇಕ ಯೋಜನೆ ರೂಪಿಸಲು ಎಸಿಎಂ ನಿರ್ದೇಶನ ನೀಡಿದ್ದಾರೆ. ಮಳೆ ಹೆಚ್ಚಾಗಿರುವುದರಿಂದ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದೆ. ದೇಶದ ಎಲ್ಲಾ ನಗರಗಳಲ್ಲಿ ರಸ್ತೆ ಗುಂಡಿ ಇವೆ. ಆದರೆ ಬೆಂಗಳೂರು ಮಾತ್ರ ಸುದ್ದಿಯಾಗುತ್ತಿದೆ. ಬೇರೆ ಕಡೆಗಳಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದು, ಈ ಸಮಸ್ಯೆ ಬಗ್ಗೆ ಹೆಚ್ಚು ಪ್ರಚಾರವಾಗುತ್ತಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ರಾಜಕೀಯ ಮಾಡುವವರು ಮಾಡಲಿ, ನಾವು ಸಂಚಾರವನ್ನು ಸುಗಮಗೊಳಿಸುವ ಕೆಲಸ ಮಾಡುತ್ತೇವೆ. ಇಲ್ಲಿವರೆಗೆ 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ