ಬಾಡಿಗೆಗೆ 500 ಕಾರು ಪಡೆದು ಗಿರವಿಗೆ ಇಟ್ಟ ಭೂಪನ ಕಥೆ!

ನೀವೇನಾದ್ರೂ ಹಣ ಬರುತ್ತೆ ಅಂತಾ ಕಂಡ ಕಂಡವರಿಗೆಲ್ಲಾ ನಿಮ್ಮ ಕಾರುಗಳನ್ನು ಬಾಡಿಗೆಗೆ ಬಿಡ್ತೀದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಲೇಬೇಕು. ಕಾರು ಕೊಡುವವರಿಗೆ ಕನಸಲ್ಲೂ ಊಹಿಸಲಾಗದಂತ ಶಾಕ್‌ ಕೊಟ್ಟಿದ್ದಾನೆ ಒಬ್ಬ ಖತರ್ನಾಕ್‌ ಅಸಾಮಿ. ಹೌದು, ಈಗ ಬಾಡಿಗೆ ವಾಹನಗಳ ಟ್ರೆಂಡ್‌ ಜೋರಾಗಿಯೇ ಇದೆ. ಅದರಲ್ಲೂ ಸೆಲ್ಫ್‌ ಡ್ರೈವಿಂಗ್‌ಗೆಂದು ವಾಹನಗಳನ್ನ ಪಡೆಯುವವರೇ ಹೆಚ್ಚು. ಹೀಗಾಗಿ ಕೆಲ ವಾಹನಗಳ ಮಾಲೀಕರು ಕಂಡ ಕಂಡವರಿಗೆಲ್ಲ ವಾಹನಗಳನ್ನು ಕೊಡುವುದೂ ಉಂಟು. ಬಳ್ಳಾರಿಯ ಅಸಾಮಿಯೊಬ್ಬ ಅಂತಹ ಮಾಲೀಕರಿಗೆ ಭರ್ಜರಿ ಶಾಕ್‌ ಕೊಟ್ಟಿದ್ದು, ಯಾಮಾರಿ ಯಾರ್ಯಾರಿಗೋ ವಾಹನಗಳನ್ನ ಬಾಡಿಗೆ ನೀಡಿದ್ರೆ ಅವು ಇನ್ಯಾರದ್ದೋ ಬಳಿ ಗಿರವಿ ಇರುತ್ತವೆ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾನೆ.

ರಾಯಚೂರು ಜಿಲ್ಲೆಯ ಸಿಂಧನೂರಿನ MD ಜಹೀದ್‌ ಭಾಷಾ ಅಲಿಯಾಸ್‌ ಸೋನು ಎಂಬ ಅಸಾಮಿ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರುಗಳನ್ನು ಬಾಡಿಗೆಗೆ ಪಡೆದಿದ್ದ. ಕಾರುಗಳ ಮಾಲೀಕರಿಗೆ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿಗಳ ವರೆಗೆ ಬಾಡಿಗೆ ನೀಡುವ ಭರವಸೆ ನೀಡಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ತಾನು ಹೇಳಿದಂತೆ ಬಾಡಿಗೆಯನ್ನ ಕಾರುಗಳ ಮಾಲಿಕರಿಗೆ ಸರಿಯಾಗಿಯೇ ನೀಡ್ತಿದ್ದ. ಆ ನಂತರ ತನ್ನ ನವರಂಗಿ ಆಟಗಳನ್ನು ತೋರಿಸಲು ಶುರುಮಾಡಿದ್ದ.

ಕಾರಿನ ಮಾಲೀಕರು ಬಾಡಿಗೆಯನ್ನು ಕೇಳಿದ್ರೆ ಒಂದೊಂದೇ ಕತೆ ಹೇಳುತ್ತಿದ್ದ. ಅದಲ್ಲ ಇದು ಹೀಗೆ ಆಗಿದೆ, ಹಾಗೇ ಆಗಿದೆ ಎಂದು. ಇದು ಹೀಗೆ ಮುಂದುವರಿದು ಮೂರು ತಿಂಗಳವರೆಗಿನ ಬಾಡಿಗೆ ಹಣ ಬಾಕಿಯಾದಾಗ ಕಾರುಗಳ ಮಾಲಕರು ಎಚ್ಚೆತ್ತುಕೊಂಡಿದ್ದಾರೆ. ಕಾರಿನ ಜಿಪಿಎಸ್​ ಟ್ರ್ಯಾಕ್​ ಮಾಡಿದಾಗ ಅವುಗಳನ್ನು ಅಪರಿಚಿತರ ಬಳಿ ಸೋನು ಗಿರವಿ ಇಟ್ಟಿರೋದು ಬೆಳಕಿಗೆ ಬಂದಿದೆ.

ಈ ಖತರ್ನಾಕ್‌ ಸೋನು ಬಳ್ಳಾರಿಯ ತನ್ನ ಸ್ನೇಹಿತನ ಮೂಲಕವೇ ಕಾರುಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ. ತನ್ನ ಅತೀ ಚಾಣಾಕ್ಷತನದಿಂದ, ಮಾಲೀಕರ ಜೊತೆ ನೇರ ಸಂಪರ್ಕವಿಲ್ಲದೆ ವ್ಯವಹಾರ ಮಾಡುತ್ತಾ ಬಂದಿದ್ದ. ಬಾಡಿಗೆ ಪಡೆದಿದ್ದ ಕಾರುಗಳಿಗೆ ಒಪ್ಪಂದವನ್ನೂ ಈತ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತ ಸರಿಯಾಗಿ ಬಾಡಿಗೆ ಹಣ ನೀಡುತ್ತಿದ್ದ ಕಾರಣ ಕಾರುಗಳ ಮಾಲಿಕರು ಈತನನ್ನ ನಂಬಿದ್ದರು. ತಿಂಗಳು ತಿಂಗಳು ಬಾಡಿಗೆ ಹಣ ಬರುತ್ತೆ ಎಂದು ಈ ಖತರ್ನಾಕ್ ಅಸಾಮಿ ಸೋನುಗೆ ಕಾರುಗಳನ್ನ ಬಾಡಿಗೆಗೆ ಕೊಟ್ಟಿದ್ದ ನೂರಾರು ಜನ ಮಾಲಕರೀಗ ಕಂಗಾಲಾಗಿದ್ದಾರೆ. ಸದ್ಯ ಬಾಡಿಗೆಯೂ ಇಲ್ಲ, ಕಾರುಗಳೂ ಇಲ್ಲದ ಸ್ಥಿಯಲ್ಲಿದ್ದಾರೆ. ವಂಚನೆಗೆ ಒಳಗಾದವರು ಸದ್ಯ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರ ಮೊರೆ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ. ನಮ್ಮ ಕಾರುಗಳನ್ನ ಮರಳಿ ನಮಗೆ ಕೊಡಿಸಿ ಎಂದು ಅಂಗಲಾಚಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author