ಶಬರಿಮಲೆ ಅಯ್ಯಪ್ಪ ದೇವಾಸ್ಥಾನದ ಚಿನ್ನದ ತಟ್ಟೆಗಳ ಕಳ್ಳತನ ಪ್ರಕರಣಕ್ಕೆ ಹೊಸ ಬೆಳಕು ಬಂದಿದೆ. ದೇವಸ್ಥಾನಕ್ಕೆ ನೀಡಿರುವ ಚಿನ್ನದ ತಟ್ಟೆಗಳನ್ನು ಪ್ರಾಯೋಜಕರು ತಮ್ಮ ಕುಟುಂಬದ ಮದುವೆ ಉದ್ದೇಶಕ್ಕಾಗಿ ಬಳಸಲು ಅನುಮತಿ ಕೇಳಿದ್ದರು ಎಂಬುದು ಇದೀಗ ಮುಂಗಡ ದಾಖಲೆಗಳಿಂದ ಹೊರಬಂದಿದೆ.
ಪ್ರಾಯೋಜಕರಾದ ಉನ್ನಿಕೃಷ್ಣನ್ ಪೊಟ್ಟಿ ಡಿಸೆಂಬರ್ 9, 2019ರಂದು ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು, ದೇವಾಲಯದ ಗರ್ಭಗುಡಿಯಲ್ಲಿ ಚಿನ್ನದ ಲೇಪನ ಕೆಲಸ ಮುಗಿಸಿದ ನಂತರ, ನನ್ನ ಬಳಿ ಉಳಿದಿರುವ ಚಿನ್ನವನ್ನು ನಾನು ಅಗತ್ಯವಿರುವ ಹುಡುಗಿಯ ಮದುವೆಗಾಗಿ ಬಳಸಲು ಇಚ್ಛಿಸುತ್ತಿದ್ದೇನೆ. ದಯವಿಟ್ಟು ನಿಮ್ಮ ಅಮೂಲ್ಯ ಅಭಿಪ್ರಾಯ ನೀಡಿ ಎಂದು ಮನವಿ ಮಾಡಿದ್ದರು. ಡಿಸೆಂಬರ್ 17, 2019ರಂದು ದೇವಸ್ವಂ ಕಾರ್ಯದರ್ಶಿಯು ಈ ಚಿನ್ನವನ್ನು ಏನು ಮಾಡಬಹುದು ಎಂಬ ಸ್ಪಷ್ಟನೆ ಕೇಳಿದ್ದರು.
ಉನ್ನಿಕೃಷ್ಣನ್ ಪೊಟ್ಟಿ, ದೇವಸ್ಥಾನದ ವಿಗ್ರಹಗಳು ಮತ್ತು ಬೆಲೆಬಾಳುವ ವಸ್ತುಗಳ ಚಿನ್ನದ ಲೇಪನ ಕಾರ್ಯವನ್ನು ತಮ್ಮ ಖರ್ಚಿನಲ್ಲಿ ಪ್ರಾಯೋಜಿಸಿದ್ದರು. ಟಿಡಿಬಿ 42.8 ಕೆಜಿ ತೂಕದ ಚಿನ್ನವನ್ನು ಚೆನ್ನೈನಲ್ಲಿರುವ ಪೊಟ್ಟಿ ಅವರ ಕಂಪನಿಗೆ ನೀಡಿತ್ತು. ಚಿನ್ನದಿಂದ ಲೇಪಿತ ತಟ್ಟೆಗಳನ್ನು ದೇವಾಲಯಕ್ಕೆ ತರುವ ಸಂದರ್ಭದಲ್ಲಿ ಅವುಗಳ ತೂಕ 38.258 ಕೆಜಿಗೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ, ಕೇರಳ ಹೈಕೋರ್ಟ್ ದೇವಸ್ವಂ ಮಂಡಳಿಯಿಂದ ಸ್ಪಷ್ಟನೆ ಕೇಳಿದ್ದು, ದೇವಾಲಯದಿಂದ ಹೊರತೆಗೆದ ಫಲಕಗಳನ್ನು ತಕ್ಷಣ ಹಿಂದಿರುಗಿಸಲು ಆದೇಶ ನೀಡಿದೆ.
ನ್ಯಾಯಾಲಯವು ದೇವಸ್ವಂ ಕೈಪಿಡಿ ಉಲ್ಲಂಘನೆ ಮತ್ತು ವಿಶೇಷ ಆಯುಕ್ತರಿಗೆ ಮಾಹಿತಿ ನೀಡದಿದ್ದಕ್ಕಾಗಿ ಟಿಡಿಬಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಹೊಣೆಗಾರಿಕೆ ವಹಿಸಬೇಕು. ಸೂಕ್ತ ತನಿಖೆ ನಡೆಸಿ ಸತ್ಯ ಹೊರಬೀಳಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ