ಮೈಸೂರು ದಸರಾ ರಾಜ್ಯವನ್ನ ಕಂಗೊಳಿಸಿದ ಮೈಸೂರು ದಸರಾ ಹಬ್ಬದ ಹಿನ್ನಲೆಯಲ್ಲಿ ನಡೆದ ಅಮಾನುಷ ಘಟನೆಗೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹೊಟ್ಟೆಪಾಡಿಗಾಗಿ ಕುಟುಂಬದೊಂದಿಗೆ ಮೈಸೂರಿಗೆ ಬಂದು ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಘೋರ ಘಟನೆ ನಡೆದಿದೆ. ಈ ಪ್ರಕರಣದ ಸಂಬಂಧದ ಆರೋಪಿ ಕಾರ್ತಿಕ್‌ನನ್ನು ಮೈಸೂರು ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡೇಟು ಹೊಡೆದು ಸ್ಥಬ್ಧಗೊಳಿಸಿದ್ದಾರೆ.
ಕಲಬುರಗಿ ಮೂಲದ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಮೈಸೂರು ದಸರಾ ಹಬ್ಬದ ವ್ಯಾಪಾರದ ನಿಮಿತ್ತ ಅರಮನೆ ಬಳಿ ಇರುವ ದೊಡ್ಡಕೆರೆ ಮೈದಾನದಲ್ಲಿ ತಾತ್ಕಾಲಿಕ ಬಂದು ನೆಲೆಸಿದ್ದರು. ಬಲೂನ್ ಮಾರಾಟದಲ್ಲಿ ತೊಡಗಿದ್ದ ಬಾಲಕಿ, ಬುಧವಾರ ರಾತ್ರಿ ತನ್ನ ಪೋಷಕರ ಜೋಪಡಿಯಲ್ಲಿ ಮಲಗಿದ್ದಳು. ಆದರೆ, ಬೆಳಿಗ್ಗೆ 6:30ರ ವೇಳೆಗೆ ಆಕೆ ನಾಪತ್ತೆಯಾಗಿದ್ದು, ಹುಡುಕಾಟ ಆರಂಭಿಸಲಾಯಿತು.
ಕೇವಲ 50 ಮೀಟರ್ ದೂರದಲ್ಲಿರುವ ಮಣ್ಣಿನ ರಾಶಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಯ್ತು. ಶವದ ಮೇಲೆ ಬಟ್ಟೆ ಸರಿಯಾಗಿ ಇರದ ಕಾರಣ, ಕುಟುಂಬಸ್ಥರು ಅತ್ಯಾಚಾರ ಮತ್ತು ಕೊಲೆಯ ಶಂಕೆ ವ್ಯಕ್ತಪಡಿಸಿದರು. ಮೈಸೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದರು.
ಪೊಲೀಸರು ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಬಾಲಕಿಯನ್ನು ರಾತ್ರಿ ಎಳೆದೊಯ್ದ ವ್ಯಕ್ತಿಯ ದೃಶ್ಯ ಸೆರೆಯಾಗಿದೆ. ಆರೋಪಿ ಎಂದು ಗುರುತಿಸಲಾದ ಕಾರ್ತಿಕ್ ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾಗಿದ್ದು, ಈತನ ಮೇಲೆ ಮೊದಲೇಲೂ ಅಪರಾಧ ದಾಖಲಾಗಿದೆ. ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ 2 ವರ್ಷ ಜೈಲುವಾಸ ಅನುಭವಿಸಿದ್ದ ಈತನು, ಕೇವಲ 4 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಅತ್ಯಾಚಾರ ಮತ್ತು ಕೊಲೆ ಮಾಡಿದ ನಂತರ, ಆರೋಪಿ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲದತ್ತ ಪರಾರಿಯಾಗಿದ್ದ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೈಸೂರು ಪೊಲೀಸರು, ಮೇಟಗಳ್ಳಿ ಬಳಿ ಆತನನ್ನು ಸೆರೆಹಿಡಿಯಲು ಮುಂದಾದಾಗ, ಕಾರ್ತಿಕ್ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸ್ ಪಡೆ ಕಾಲಿಗೆ ಗುಂಡೇಟು ಹೊಡೆದು ಆತನನ್ನು ಹಿಡಿಯಲಾಯಿತು. ಇದೀಗ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.