ನಾನು ಶಿಸ್ತಿನ ಸಿಪಾಯಿ : ಸಚಿವ ಸ್ಥಾನ ಖುಷಿಯಿಂದ ಬಿಟ್ಟುಕೊಡ್ತೀನಿ – ಜಮೀರ್

ಕಾಂಗ್ರೆಸ್‌ ಪಾಳಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ವೇಗ ಪಡೆದಿವೆ. ಬಿಹಾರ ಚುನಾವಣೆಯ ನಂತರ ಕರ್ನಾಟಕದಲ್ಲೂ ಸಚಿವರ ಬದಲಾವಣೆ ಸಾಧ್ಯತೆ ಇದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಪ್ರತಿಕ್ರಿಯೆ ನೀಡಿದ್ದು, ತಾವು ಸಚಿವ ಸ್ಥಾನದಲ್ಲಿ ಮುಂದುವರೆಯುವ ವಿಶ್ವಾಸ ಇದ್ದರೂ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಸೇರಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಪಕ್ಷ ಹೈಕಮಾಂಡ್‌ ಪಕ್ಷ. ಅವರು ಹಾಕಿದ ಗೇರೆಯನ್ನು ನಾವು ದಾಟುವುದಿಲ್ಲ. ಪಕ್ಷ ಯಾವ ಜವಾಬ್ದಾರಿಯನ್ನು ನೀಡುತ್ತದೆಯೋ ಅದನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ. ನಾನೇ ಮಂತ್ರಿಯಾಗಬೇಕು ಅನ್ನೋದಿಲ್ಲ. 2.5 ವರ್ಷ ಅವಕಾಶ ನೀಡಿದರು, ಈಗ ಬೇರೆ ಯಾರಿಗಾದರೂ ಅವಕಾಶ ಕೊಟ್ಟರೆ ಖುಷಿಯಾಗಿ ಹಿಂತೆಗೆದುಕೊಳ್ಳುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡುವ ವಿಷಯದಲ್ಲಿಯೂ ಅವರು ಸ್ಪಷ್ಟನೆ ನೀಡಿದ ಅವರು, ನಮ್ಮಲ್ಲಿ ಅಲ್ಪಸಂಖ್ಯಾತರು ಆರು ಬಾರಿ ಸಚಿವರಾಗಿದ್ದಾರೆ. ತನ್ವೀರ್‌ ಸೇಠ್‌ ಸಹ ಆರು ಬಾರಿ ಸಚಿವರಾಗಿದ್ದಾರೆ. ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುವುದು ಸಹಜ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವ ಜವಾಬ್ದಾರಿಯನ್ನು ನೀಡಿದರೂ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಹುದ್ದೆಗಳ ಬದಲಾವಣೆಯ ಕುರಿತ ಪ್ರಶ್ನೆಗೆ ಅವರು ಸ್ಪಷ್ಟವಾಗಿ ಉತ್ತರಿಸಿದರು. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರು ಆ ಸ್ಥಾನದಲ್ಲಿ ಇದ್ದಾರೆ. ಡಿಕೆ ಶಿವಕುಮಾರ್‌ ಅವರು ಕೂಡ ಇದೇ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಐದು ವರ್ಷ ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವು ಹೇಳಿದ್ದೇವೆ. ಅವರನ್ನು ಬದಲಾಯಿಸುವ ತೀರ್ಮಾನ ನಮ್ಮದಾಗುವುದಿಲ್ಲ, ಅದು ಹೈಕಮಾಂಡ್‌ನದು. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಕುರ್ಚಿಯೂ ಖಾಲಿ ಇಲ್ಲ, ಡಿಕೆ ಶಿವಕುಮಾರ್‌ ಈಗಾಗಲೇ ಆ ಸ್ಥಾನದಲ್ಲಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು. ನಮ್ಮದು ಹೈಕಮಾಂಡ್‌ ಪಕ್ಷ. ಅವರ ತೀರ್ಮಾನವೇ ಅಂತಿಮ. ನಾವು ಅದರ ಗೇರೆ ದಾಟುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author