ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಫ್ಘಾನಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಇಸ್ತಾನ್ಬುಲ್ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ವಿಫಲವಾದರೆ, ಪಾಕಿಸ್ತಾನ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಯುದ್ಧಕ್ಕೆ ಇಳಿಯುವುದು ಅನಿವಾರ್ಯ ಎಂದು ಹೇಳಿದ್ದಾರೆ. ಮಾತುಕತೆಗಳು ಯಶಸ್ವಿಯಾಗದಿದ್ದರೆ, ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದೊಂದಿಗೆ ಸಂಘರ್ಷವನ್ನು ತಪ್ಪಿಸುವ ಆಯ್ಕೆ ಉಳಿಯುವುದಿಲ್ಲ.
ನಾವು ಶಾಂತಿ ಬಯಸುತ್ತೇವೆ. ಆದರೆ ನಮ್ಮ ಭದ್ರತೆಗೆ ಧಕ್ಕೆಯಾದರೆ ಪ್ರತಿಕ್ರಿಯೆ ನೀಡುತ್ತೇವೆ ಎಂದು ಆಸಿಫ್ ಎಚ್ಚರಿಸಿದರು. ಅಫ್ಘಾನಿಸ್ತಾನ ಈ ಬೆದರಿಕೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದಲ್ಲಿ ಪ್ರಸ್ತುತ ಸಮಾಧಾನಕರ ಪರಿಸ್ಥಿತಿ ನೆಲೆಸಿದ್ದು, ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ಕಾಯ್ದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಅಕ್ಟೋಬರ್ 9ರಂದು ಪಾಕಿಸ್ತಾನವು ಅಫ್ಘಾನಿಸ್ತಾನದೊಳಗಿನ TTP ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನ ಅಫ್ಘಾನಿಸ್ತಾನ ಟಿಟಿಪಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ, ಅಫ್ಘಾನಿಸ್ತಾನವು ಪಾಕಿಸ್ತಾನವು ಐಸಿಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಪ್ರತಿದಾಳಿ ಮಾಡಿ ಆರೋಪ ಮಾಡಿತ್ತು.
ದಾಳಿಗಳ ನಂತರ, ಡುರಾಂಡ್ ರೇಖೆಯುದ್ದಕ್ಕೂ ಐದು ದಿನಗಳ ಕಾಲ ಗಂಭೀರ ಘರ್ಷಣೆಗಳು ನಡೆದವು. ಎರಡೂ ದೇಶಗಳ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದ್ದರು. ಅಫ್ಘಾನ್ ಕ್ರಿಕೆಟಿಗನೊಬ್ಬ ಸಹ ಈ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆಂದು ವರದಿಯಾಗಿದೆ. ಸೈನ್ಯಗಳು ಪರಸ್ಪರರ ಮಿಲಿಟರಿ ಪೋಸ್ಟ್ಗಳನ್ನು ವಶಪಡಿಸಿಕೊಂಡ ಪರಿಣಾಮ, ಪರಿಸ್ಥಿತಿ ತೀವ್ರಗೊಂಡಿತ್ತು.
ಈ ವೇಳೆ ಕತಾರ್ ಮಧ್ಯಸ್ಥಿಕೆ ವಹಿಸಿ, ದೋಹಾದಲ್ಲಿ ಎರಡು ದಿನಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಹಾಯಮಾಡಿತು. ಆದರೆ ಆ ವಿರಾಮ ಹೆಚ್ಚು ಕಾಲ ಉಳಿಯಲಿಲ್ಲ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತೆ ತಾರಕಕ್ಕೇರಿರುವಾಗ, ಇಸ್ತಾನ್ಬುಲ್ ಶಾಂತಿ ಮಾತುಕತೆಗಳ ಯಶಸ್ಸು ಎರಡೂ ರಾಷ್ಟ್ರಗಳ ಭವಿಷ್ಯವನ್ನು ನಿರ್ಧರಿಸಲಿದೆ. ಮಾತುಕತೆ ವಿಫಲವಾದರೆ, ಈ ಪ್ರದೇಶವು ಮತ್ತೆ ರಕ್ತಪಾತದ ಅಂಚಿನತ್ತ ತಳ್ಳಲ್ಪಡುವ ಭೀತಿ ವ್ಯಕ್ತವಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

