Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಬದುಕುವ ರೀತಿಯನ್ನು ಹೇಳಿದ್ದಾರೆ. ಅಲ್ಲದೇ, ಹೇಗೆ ಬದುಕಬೇಕು, ಎಲ್ಲಿ ಬದುಕಬೇಕು, ಎಂಥವರ ಜತೆ ಬದುಕಬೇಕು ಇದೆಲ್ಲವೂ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಎಂಥವರ ಸಂಗ ಮಾಡಬಾರದು ಅಂತಾರೆ ಚಾಣಕ್ಯರು ತಿಳಿಯೋಣ ಬನ್ನಿ..
ಮೂರ್ಖ ಶಿಷ್ಯ: ಮೂರ್ಖ ವ್ಯಕ್ತಿಗೆ ನೀವು ಏನೇ ಹೇಳಿದರೂ ಅದು ಅರ್ಥವಾಗುವುದಿಲ್ಲ. ಏಕೆಂದರೆ ಅರ್ಥ ಮಾಡಿಕ“ಳ್ಳುವ ಮನಸ್ಸು ಅವನಿಗೆ ಇರುವುದಿಲ್ಲ. ಸದಾ ಕಾಲ ಬೇರೆಡೆ ಅವನ ಗಮನವಿರುತ್ತದೆ. ಇಂಥ ವ್ಯಕ್ತಿಗಳಿಗೆ ನೀವು ಗುರುಗಳಾದರೆ, ನೀವು ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ. ಇದು ಸಮಯ ವ್ಯರ್ಥ ಮಾಡಿದ ಹಾಗೆ. ಅಲ್ಲದೇ, ನಿಮ್ಮ ಜ್ಞಾನವನ್ನೂ ವ್ಯರ್ಥ ಮಾಡಿದ ಹಾಗೆ. ಹಾಗಾಗಿ ನೀವು ಶಿಷ್ಯನಾಗಿ ಸ್ವೀಕರಿಸುವವನು ನಿಮ್ಮ ಶಿಷ್ಯನಾಗಲು ಅರ್ಹನಾದಲ್ಲಿ ಮಾತ್ರ ಅಂಥವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ನಿಮ್ಮ ಸಮಯ, ಜ್ಞಾನವನ್ನು ಉಳಿಸಿ ಎನ್ನುತ್ತಾರೆ ಚಾಣಕ್ಯರು.
ದುಷ್ಟ ಹೆಂಗಸು: ವಿವಾಹವಾಗುವ ವಿಚಾರದಲ್ಲೇ ಆಗಲಿ, ಗೆಳೆತನ ಮಾಡುವ ವಿಚಾರದಲ್ಲೇ ಆಗಲಿ ಅಥವಾ ಯಾವುದೇ ವಿಚಾರದಲ್ಲಿ ನೀವು ಓರ್ವ ಮಹಿಳೆಯನ್ನು ನಿಮ್ಮ ಜೀವನದಲ್ಲಿ ಆಮಂತ್ರಿಸುವಾಗ, ಆಕೆಯ ಬುದ್ಧಿ ಸರಿಯಾಗಿದೆಯಾ, ಇಲ್ಲವಾ ಅನ್ನುವುದು ಅಗತ್ಯವಾಗಿ ಪರೀಕ್ಷಿಸಬೇಕು.
ಏಕೆಂದರೆ 1 ಬಾರಿ ಆಕೆ ನಿಮ್ಮ ಜೀವನಕ್ಕೆ ಬಂದರೆ, ಆಕೆಯ ದುರ್ಬುದ್ಧಿಯಿಂದ ನಿಮ್ಮ ಮತ್ತು ನಿಮ್ಮ ಮನೆಯವರ ನೆಮ್ಮದಿಯೇ ನಾಶವಾಗುತ್ತದೆ. ಹಾಗಾಗಿ ಆಕೆಗೆ ದುರಾಸೆ, ದುರ್ಬುದ್ಧಿ, ಅಸೂಯೆ, ಅಗತ್ಯಕ್ಕಿಂತ ಹೆಚ್ಚು ಕೋಪ, ಕಂಜೂಸುತನ ಇದೆಲ್ಲ ಇದೆಯಾ ಎಂದು ಪರೀಕ್ಷಿಸಿ, ಬಳಿಕ ವರಿಸುವುದು ಉತ್ತಮ ಅಂತಾರೆ ಚಾಣಕ್ಯರು.
ರೋಗಪೀಡಿತ ವ್ಯಕ್ತಿ: ಮನುಷ್ಯನಿಗೆ ರೋಗ ಬರುವುದು ಸಹಜ. ಆದರೆ ತನ್ನ ನೋವನ್ನು ಸಹಿಸದೇ, ಪ್ರತಿದಿನ ಕಿರಿಕಿರಿ, ಕೋಪ ಮಾಡುವವರ ಬಳಿ ನಾವಿದ್ದರೆ, ನಾವೂ ಅನಾರೋಗ್ಯಕ್ಕೀಡಾಗುತ್ತೇವೆ. ಮಾನಸಿಕ ನೆಮ್ಮದಿ ಹಾಳಾಗುವುದು ಕೂಡ ಅನಾರೋಗ್ಯ. ಮತ್ತು ಅಂಥ ಅನಾರೋಗ್ಯಕ್ಕಿಂತ ಬೇರೆ ಅನಾರೋಗ್ಯ ಬೇಡ. ಹಾಗಾಗಿ ರೋಗಪೀಡಿತ ವ್ಯಕ್ತಿಯಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ.

