ಕಬ್ಬಿನ ದರ ನಿಗದಿಗೆ ರೈತರ ಬಿಗಿಪಟ್ಟು

ಕಬ್ಬಿಗೆ ದರ ನಿಗದಿ ಮಾಡುವಂತೆ ಬೆಳೆಗಾರರು ಆಗ್ರಹಿಸಿದ್ದು, ಹೋರಾಟದ ಹಾದಿ ತುಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಜತ್ತ-ಜಂಬೂಟಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗ್ತಿದೆ. ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಕೆಂಡಾಮಂಡಲರಾಗಿದ್ದು, ರೈತರ ಹೋರಾಟಕ್ಕೆ ಕರವೇ ಶಿವರಾಮೇ ಗೌಡ ಬಣ ಕೂಡ ಬೆಂಬಲ ನೀಡಿದೆ.

ಅಥಣಿಯಲ್ಲಷ್ಟೇ ಅಲ್ಲ.. ಹುಕ್ಕೇರಿಯಲ್ಲೂ ರೈತರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸ್ಪಂದಿಸದ ಕಾರಣ ಚಿಕ್ಕೋಡಿ ಪಟ್ಟಣ ಸೇರಿ ವಿವಿಧೆಡೆ, ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಹುಕ್ಕೇರಿ ಪಟ್ಟಣ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇನ್ನು ಚಿಕ್ಕೋಡಿ, ರಾಯಬಾಗ ತಾಲೂಕುಗಳಲ್ಲಿ ಪ್ರತಿಭಟನೆ ಕಾವೇರುವ ಸಾಧ್ಯತೆ ಇದೆ. ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡ್ತಿದ್ರು, ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೆಳಗಾವಿ ಭಾಗದಲ್ಲಿ ಪ್ರಭಾವಿಗಳ ಒಡೆತನದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರ ಮುಂದಾದಂತೆ ಕಾಣಿಸ್ತಿದೆ. ಹೀಗಾಗಿ ಬೆಂಬಲ ಬೆಲೆ ನಿಗದಿ ಮಾಡಬೇಕಿದ್ದ ಸರ್ಕಾರ ಜಾಣ ನಡೆ ಅನುಸರಿಸುತ್ತಿದೆ. ಪ್ರಭಾವಿಗಳ ವಿರೋಧ ಕಟ್ಟಿಕೊಳ್ಳುವುದಕ್ಕೆ ಹೋಗದೇ ಸೈಲೆಂಟ್‌ ಆಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 26 ಸಕ್ಕರೆ ಕಾರ್ಖಾನೆಗಳಿವೆ. ಸಚಿವ ಸತೀಶ್‌ ಜಾರಕಿಹೊಳಿ ಒಡೆತನದಲ್ಲಿ 2 ಕಾರ್ಖಾನೆಗಳು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಒಡೆತನದಲ್ಲಿ 1, ಹೆಬ್ಬಾಳ್ಕರ್‌ ಸಹೋದರ ಚನ್ನರಾಜ್‌ ಹಟ್ಟಿಹೊಳಿ ಒಡೆತನದಲ್ಲಿ 1, ಕತ್ತಿ ಕುಟುಂಬದ ಒಡೆತನದಲ್ಲಿ 1, ಲಕ್ಷ್ಮಣ ಸವದಿ ಹಿಡಿತದಲ್ಲಿ 1, ರಮೇಶ್‌ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಒಡೆತನದಲ್ಲಿ, ತಲಾ ಒಂದೊಂದು ಸೇರಿದಂತೆ 26 ಸರ್ಕಾರೆ ಕಾರ್ಖಾನೆಗಳಿವೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ಭಾಗದ ರೈತರು ಪ್ರತಿಭಟನೆಯ ದಾರಿ ತುಳಿದಿದ್ದಾರೆ. ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಲ್ಲು ತೂರಾಟವೂ ನಡೆದಿದೆ.

About The Author