Political News: ಇರುವ ಸ್ಥಳದಿಂದಲೇ ಹುಟ್ಟುಹಬ್ಬಕ್ಕೆ ಹರಸಿ: ಅಭಿಮಾನಿಗಳಲ್ಲಿ ಬಿ.ವೈ.ವಿಜಯೇಂದ್ರ ಮನವಿ

Political News: ನಾಳೆ ಅಂದ್ರೆ ನವೆಂಬರ್ 5ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರ್ತ್‌ಡೇ. ಆದರೆ ವಿಜಯೇಂದ್ರ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಗೆ ಸಾಥ್ ನೀಡಿ, ತಾವೂ ಆ ಹೋರಾಟದಲ್ಲಿ ಪಾಲ್ಗ“ಂಡಿದ್ದಾರೆ.

ಹೀಗಾಗಿ ಹೋರಾಟ ಮುಗಿಯುವವರೆಗೂ ಉತ್ತರಕರ್ನಾಟಕದಲ್ಲೇ ಇರಬೇಕೆಂದು ನಿರ್ಧರಿಸಿರುವ ವಿಜಯೇಂದ್ರ, ನಾಳೆ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಇದ್ದಲ್ಲಿಂದಲೇ ಹರಸಿ ಎಂದು ಮನವಿ ಮಾಡಿದ್ದಾರೆ.

ಆತ್ಮೀಯ ಅಭಿಮಾನಿ-ಹಿತೈಷಿಗಳಲ್ಲಿ ವಿನಂತಿ… ಕಳೆದ ಆರು ದಿನಗಳಿಂದಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಗುರ್ಲಾಪುರ ಕ್ರಾಸ್ ಬಳಿ ನಡೆಸುತ್ತಿರುವ ಹೋರಾಟದಲ್ಲಿಂದು ಭಾಗವಹಿಸಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು ಕಬ್ಬು ಬೆಳೆಗಾರರ ಬೇಡಿಕೆ ಅತ್ಯಂತ ನ್ಯಾಯೋಜಿತವಾಗಿದೆ. ಇವರ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಈ ಹೋರಾಟಕ್ಕೆ ಹೆಗಲುಕೊಟ್ಟು ನಿಲ್ಲಬೇಕಾಗಿರುವುದು ನನ್ನ ಕರ್ತವ್ಯವೆಂದು ಪರಿಭಾವಿಸಿ ನಾಳಿನ ನನ್ನ ಜನ್ಮದಿನಾಚರಣೆಯ ಸಂದರ್ಭದ ಸಡಗರವನ್ನು ಬದಿಗೊತ್ತಿ ರೈತರೊಂದಿಗೆ ಇದ್ದು, ಅವರ ಹೋರಾಟಕ್ಕೆ ದನಿಗೂಡಿಸುವವನಿದ್ದೇನೆ.

ಪೂಜ್ಯ ತಂದೆ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ನಾಡಿನ ರೈತರು ಸಂಕಷ್ಟಕ್ಕೀಡಾದಾಗಲೆಲ್ಲ ದನಿ ಎತ್ತಿ ಹೋರಾಟ ನಡೆಸಿದ್ದಾರೆ, ರೈತರ ಹಕ್ಕುಗಳಿಗಾಗಿ ತಮ್ಮ ಸಾರ್ವಜನಿಕ ಬದುಕಿನ ಬಹು ಭಾಗವನ್ನು ಮೀಸಲಿಟ್ಟು ಹೋರಾಡಿದ್ದಾರೆ. ಅದೇ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪ ಹೊತ್ತ ನಾನು ರೈತರು ಸಂಕಷ್ಟದಲ್ಲಿರುವಾಗ ಅವರೊಂದಿಗೆ ಇರಬೇಕಾಗಿರುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದೇನೆ. ಈ ಕಾರಣಕ್ಕಾಗಿ ನಾನು ಹೋರಾಟದ ಸ್ಥಳದಿಂದ ಬೆಂಗಳೂರಿಗೆ ಹಿಂದಿರುಗುವ ನಿರ್ಧಾರ ಕೈಬಿಟ್ಟಿದ್ದೇನೆ. ಆದ್ದರಿಂದ ನನ್ನ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ನನ್ನ ಈ ನಿಲುವನ್ನು ಬೆಂಬಲಿಸಿ ನಾಳೆ ತಾವು ಇದ್ದಲ್ಲಿಂದಲೇ ನನ್ನನ್ನು ಹಾರೈಸಬೇಕೆಂದು ಮನವಿ ಮಾಡುವೆ ಎಂದು ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಮನವಿ ಮಾಡಿದ್ದಾರೆ.

About The Author