ರಾಜ್ಯದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿಯಾಗುವ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ರೈತರ ಪ್ರತಿಭಟನೆಯ ಹಿನ್ನೆಲೆ, ಸರ್ಕಾರದ ಪರವಾಗಿ ಸಚಿವ ಎಚ್.ಕೆ. ಪಾಟೀಲ್ ಅವರು ರೈತರ ಅಹವಾಲು ಕೇಳಿದ್ದಾರೆ. ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಕಬ್ಬಿನ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯದಲ್ಲ, ಕೇಂದ್ರ ಸರ್ಕಾರದದಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಕಾರ್ಖಾನೆಗಳು ಒಂದೇ ಬೆಲೆ ಕೊಡಲು ಸಾಧ್ಯವಿಲ್ಲ. ಇಳುವರಿ ಆಧಾರದ ಮೇಲೆ ಕಬ್ಬಿನ ದರ ಬದಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇಳುವರಿ ಹೆಚ್ಚು ಇರುವ ಕಾರಣ ಅಲ್ಲಿನ ದರ ಹೆಚ್ಚಾಗಿದೆ. ಇಳುವರಿಯಿಂದ ಇಳುವರಿಗೆ 300 ರೂಪಾಯಿವರೆಗೆ ವ್ಯತ್ಯಾಸ ಉಂಟಾಗುತ್ತದೆ. ಕೇಂದ್ರ ಸರ್ಕಾರವೇ ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ. ಅದನ್ನು ರಾಜ್ಯಗಳು ಅನುಸರಿಸಬೇಕು. ಹೀಗಾಗಿ ಮಹಾರಾಷ್ಟ್ರದಂತೆ ನಾವು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ವಿಷಯದ ಬಗ್ಗೆ ಇಂದು ಸಭೆಯಲ್ಲಿ ಚರ್ಚೆ ನಡೆಯಲಿದೆ. ನಾವು ಎಲ್ಲರೂ ಸೇರಿ 3,200 ರೂ. ದರಕ್ಕೆ ಒಪ್ಪಿಕೊಂಡಿದ್ದೇವೆ. ಆದರೆ ರೈತರು ಅದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿ ವರ್ಷ ಕಬ್ಬಿನ ಬೆಲೆ ವಿಷಯ ಪ್ರತಿಭಟನೆಗೆ ಕಾರಣವಾಗುತ್ತದೆ, ಆದರೆ ಈ ಬಾರಿ ಅದು ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದರು.
ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಬಿಜೆಪಿಯವರು ಕೇಂದ್ರದಲ್ಲೇ ಸರ್ಕಾರ ನಡೆಸುತ್ತಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗಿ ಸಕ್ಕರೆ ದರ ಹೆಚ್ಚಿಸುವಂತೆ ಒತ್ತಾಯಿಸಬೇಕು. ರಾಜ್ಯ ಸರ್ಕಾರಕ್ಕೆ ಇದರಲ್ಲಿ ಪಾತ್ರವಿಲ್ಲ. ಸಕ್ಕರೆ, ಕಬ್ಬಿನ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಕಳೆದ ಆರು ವರ್ಷಗಳಿಂದ ಸಕ್ಕರೆ ಬೆಲೆ ಏರಿಲ್ಲ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ಅದರ ಜವಾಬ್ದಾರಿ ಕೇಂದ್ರದದ್ದೇ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




