Koppala News: ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ 220 ಕೆವಿ ಹೈಟೆನ್ಷನ್ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ವೇಳೆ ರೈತರು ಹಾಗೂ ಟೊರೆಂಟ್ ಸೌರ್ಯ ಉರ್ಜಾ-2 ಕಂಪನಿಯ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದು ಬಳಿಕ ಘರ್ಷಣೆಗೆ ತಿರುಗಿದ ಘಟನೆ ವರದಿಯಾಗಿದೆ.
ಗ್ರಾಮದ ರೈತ ರಾಮಪ್ಪ ಭಜಂತ್ರಿ ಅವರ 4 ಎಕರೆ 10 ಗುಂಟೆ ಜಮೀನಿನಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಕಂಪನಿಯು ವಿದ್ಯುತ್ ತಂತಿ ಅಳವಡಿಸಲು ಮುಂದಾದಾಗ, ಅವರ ಕುಟುಂಬಸ್ಥರು ಕಾಮಗಾರಿ ತಡೆಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರು ರೈತರ ಮೊಬೈಲ್‌ಗಳನ್ನು ಕಸಿದುಕೊಂಡು, ಕಲ್ಲು ಮತ್ತು ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ಘಟನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ರೈತರನ್ನು ಬಲವಂತವಾಗಿ ಹಿಡಿದು ಹಗ್ಗದಿಂದ ಕಟ್ಟಿ ಹಾಕಲಾಗಿತ್ತು ಎಂದು ನೊಂದ ರೈತರು ಕಣ್ಣೀರಿಟ್ಟಿದ್ದಾರೆ. ಈ ಹಲ್ಲೆಯಲ್ಲಿ ಗಾಯಗೊಂಡ ರೈತ ಮುದಿಯಪ್ಪ ಭಜಂತ್ರಿ ಅವರ ಕೊರಳಲ್ಲಿದ್ದ ಎರಡು ತೊಲೆ ಬಂಗಾರದ ಸರ ಕೂಡ ಕಾಣೆಯಾಗಿದ್ದು, ಗಾಯಾಳುಗಳಿಗೆ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಷ್ಟಪಟ್ಟು ಖರೀದಿಸಿದ ಜಮೀನಿನಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಕಾಮಗಾರಿ ಆರಂಭಿಸಿ, ಪ್ರಶ್ನೆ ಮಾಡಿದ್ದಕ್ಕೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಬಾಧಿತ ರೈತರ ಕುಟುಂಬವು ಅಳಲು ತೋಡಿಕೊಂಡಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತಪ್ಪ ತಳವಾರ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ರೈತರ ದೂರಿನ ಅನ್ವಯ ಕಂಪನಿಯ ಸಿಬ್ಬಂದಿ ಮಂಜುನಾಥ್, ಶರಣಪ್ಪ ಹಾಗೂ ಪಶ್ಚಿಮ ಬಂಗಾಳ ಮೂಲದ 16 ಕಾರ್ಮಿಕರು ಸೇರಿ ಒಟ್ಟು 18 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.
ಇನ್ನೊಂದೆಡೆ, ಟೊರೆಂಟ್ ವಿದ್ಯುತ್ ಕಂಪನಿಯ ಸಿಬ್ಬಂದಿ ಮಂಜುನಾಥ್ ಅವರು ರೈತರ ಒಪ್ಪಿಗೆ ಪಡೆದೇ ಕಾಮಗಾರಿ ಆರಂಭಿಸಲಾಗಿತ್ತು ಹಾಗೂ ಘಟನೆಯಲ್ಲಿ ಮೂರನೇ ವ್ಯಕ್ತಿಯ ಪ್ರಚೋದನೆ ಇದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ರೈತ ಮುಖಂಡ ವೀರಭದ್ರಯ್ಯ ಬೆನಕನಾಳಮಠ ಅವರು, ಕಂಪನಿಯು ಗ್ರಾಮದಲ್ಲಿ ಯಾರಿಗೂ ಸಮರ್ಪಕ ಮಾಹಿತಿ ನೀಡದೆ ರಾತ್ರಿ ವೇಳೆಯಲ್ಲಿ ಗೋಪುರ ನಿರ್ಮಾಣ ಮತ್ತು ತಂತಿ ಎಳೆಯುವ ಕೆಲಸ ಮಾಡುತ್ತಿದ್ದು, ಕೆಲವರಿಗೆ ಮಾತ್ರ ಪರಿಹಾರ ಕೊಟ್ಟು ಉಳಿದ ರೈತರ ಮೇಲೆ ಒತ್ತಡ ಹೇರುತ್ತಿದೆ ಎಂದು ಖಂಡಿಸಿದ್ದಾರೆ. ಸೂಕ್ತ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿರುವುದಕ್ಕೆ ಸ್ಥಳೀಯವಾಗಿ ಅಸಮಾಧಾನವೂ ವ್ಯಕ್ತವಾಗಿದೆ.
ಈ ದೌರ್ಜನ್ಯವನ್ನು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘವು ತೀವ್ರವಾಗಿ ಖಂಡಿಸಿದ್ದು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಶ ಶಾಖಾಪೂರ ಅವರು ಸರ್ಕಾರದ ಖಾಸಗಿ ಕಂಪನಿ ಪರ ನೀತಿಗಳು ರೈತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೊಂದ ರೈತರಿಗೆ ನ್ಯಾಯ ಸಿಗುತ್ತದೆಯೇ ಅಥವಾ ಕಂಪನಿಯ ದೌರ್ಜನ್ಯ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.




