ಬಿಹಾರ ಎಲೆಕ್ಷನ್ ಮುಗಿಯುತ್ತಿದ್ದಂತೆ ಸಿದ್ದು ಅತ್ಯಾಪ್ತ ಸಚಿವ ಸತೀಶ್ ಜಾರಕಿಹೊಳಿ, ದಿಲ್ಲಿಗೆ ದೌಡಾಯಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು, ಭೇಟಿಯಾಗಿದ್ದು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತು ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಸಚಿವರು ಮತ್ತು ಶಾಸಕರು ಈ ಕುರಿತು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಒಂದೆಡೆ ಡಿಕೆಶಿ ಸಿಎಂ ಸ್ಥಾನಕ್ಕೇರಲು ಶತಪ್ರಯತ್ನ ಮಾಡ್ತಿದ್ದಾರೆ. ಮತ್ತೊಂದೆಡೆ ಅಹಿಂದ ನಾಯಕತ್ವದ ಕೂಗು ಜೋರಾಗಿದೆ. ಸಿದ್ದರಾಮಯ್ಯರನ್ನು ಕೆಳಗಿಳಿಸಿದ್ದೇ ಆದ್ರೆ, ದಲಿತ ನಾಯಕರಿಗೆ ಸಿಎಂ ಸ್ಥಾನ ಕೊಡಲೇಬೇಕೆಂಬ ಆಗ್ರಹ ಹೆಚ್ಚಾಗಿದೆ.
ಈ ರಾಜಕೀಯ ಬೆಳವಣಿಗೆಗಳ ಮಧ್ಯೆ ಸುರ್ಜೇವಾಲಾರನ್ನು ದಿಲ್ಲಿ ನಿವಾಸದಲ್ಲಿ, ಸತೀಶ್ ಜಾರಕಿಹೊಳಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ, ಸುರ್ಜೇವಾಲಾ ಜೊತೆ ಸುಮಾರು 35 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ್ದಾರೆ. ಸಿಎಂ ಸ್ಥಾನ ಬೇರೆಯವರ ಪಾಲಾದ್ರೆ, ಮಂತ್ರಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಡಿಮ್ಯಾಂಡ್ ಮಾಡಿರುವ ಸಾಧ್ಯತೆ ಇದೆ.
ಸುರ್ಜೇವಾಲಾ-ಸತೀಶ್ ಜಾರಕಿಹೊಳಿ ಭೇಟಿಯು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ವಿಚಾರಗಳು ಮತ್ತು ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಸುಳಿವು ನೀಡುತ್ತಿದ್ಯಾ ಎಂಬ ಪ್ರಶ್ನೆಗೂ ಕಾರಣವಾಗಿದೆ.

