ಉಪೇಂದ್ರ–ಪ್ರಿಯಾಂಕಾ ಫೋನ್ ಹ್ಯಾಕ್, ಪ್ರಕರಣದಲ್ಲಿ ಸೈಬರ್ ವಂಚನೆ ಬಯಲು!

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ ಫೋನ್ ಹ್ಯಾಕ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬ ವ್ಯಕ್ತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಆರೋಪಿಯನ್ನು ದೆಹಲಿ ಸೋನಿಯಾ ನಗರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಸ್ತುತ ಅವರನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 15 ರಂದು ಬೆಳಗ್ಗೆ ಪ್ರಿಯಾಂಕಾ ಉಪೇಂದ್ರ ಅವರಿಗೆ ಅನಾಮಧೇಯ ಸಂಖ್ಯೆಯಿಂದ ಕರೆ ಬಂದು, ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿದರೆ ಖಚಿತಪಡಿಸಬಹುದು ಎಂದು ಹೇಳಲಾಗಿತ್ತು.

ಪ್ರಿಯಾಂಕಾ ಅವರು ಸೂಚಿಸಿದ ನಂಬರ್ ಡಯಲ್ ಮಾಡಿದ ಕ್ಷಣದಲ್ಲೇ, ಅವರ ಮೊಬೈಲ್ ಹ್ಯಾಕ್ ಆಗಿತ್ತು. ಮೊದಲಿಗೆ ತಾಂತ್ರಿಕ ಸಮಸ್ಯೆ ಎಂದು ಭಾವಿಸಿದ ಪ್ರಿಯಾಂಕಾ ಅವರು ಪತಿ ಉಪೇಂದ್ರ ಮತ್ತು ಕುಟುಂಬದ ಪರಿಚಿತರಾದ ಮಹಾದೇವ್ ಅವರ ಫೋನ್‌ಗಳಿಂದಲೂ ಅದೇ ನಂಬರ್‌ ಡಯಲ್ ಮಾಡಿದ್ದರು.

ಇದರಿಂದ ಅವರ ಫೋನ್‌ಗಳೂ ಸಹ ಹ್ಯಾಕ್‌ ಆಗಿದ್ದವು. ಇದರಲ್ಲಿ ಉಪೇಂದ್ರ ದಂಪತಿಯ ಪುತ್ರನೂ ಸಹ ಇದ್ದು, ಅವರು 50,000 ರೂ. ಕಳುಹಿಸಿದ್ದರು. ಒಟ್ಟಾರೆ ನಾಲ್ಕು ವಿಭಿನ್ನ ಖಾತೆಗಳಿಗೆ ಸುಮಾರು 1.65 ಲಕ್ಷ ರೂ. ಹಣ ವರ್ಗಾವಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕರ ಗುಂಪುಗಳು ಇಂತಹ ಸೈಬರ್ ವಂಚನೆಗಳಲ್ಲಿ ನಿರತರಾಗಿದ್ದು,100 ಕ್ಕೂ ಹೆಚ್ಚು ಮಂದಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿ ವಿಚಾರಣೆ ಮುಂದುವರಿದಿದೆ. ಅವನಿಂದ ಸೈಬರ್ ಅಪರಾಧ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವ ನಿರೀಕ್ಷೆ ಇದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿ ವಿಕಾಸ್ ಕುಮಾರ್ ಬಂಧನ ನಡೆದಿದೆ ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ 

About The Author