ಮತ್ತಷ್ಟು ಟೆರರ್ ಡಾಕ್ಟರ್‌ಗಳ ಬಂಧನ – ವಿವಿ ಲ್ಯಾಬ್‌ನಲ್ಲಿ ಕೆಮಿಕಲ್ ಕಳ್ಳತನ

ದೆಹಲಿಯ ಭೀಕರ ಕಾರು ಸ್ಫೋಟದಲ್ಲಿ 12 ಜನರು ಬಲಿಯಾದ ಬಳಿಕ, ತನಿಖೆ ಇದೀಗ ಹೊಸ ದಿಕ್ಕು ಪಡೆದಿದೆ. ಫರೀದಾಬಾದ್‌ನ ಅಲ್‌ ಫಲಾಹ್ ಆಸ್ಪತ್ರೆಯ ಟೆರರ್ ಡಾಕ್ಟರ್‌ಗಳ ಗುರಿ ಕೇವಲ ರಾಜಧಾನಿಯಷ್ಟೇ ಅಲ್ಲ, ಅಯೋಧ್ಯೆ, ಕಾಶಿ, ಮುಂಬೈ ಸೇರಿ ದೇಶದ ಹಲವು ನಗರಗಳಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸುವ ಮಹಾ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖಾ ತಂಡದ ಕೈಗೆ ಸಿಕ್ಕಿದೆ.

ಎನ್‌ಐಎ ನಡೆಸಿದ ಶೋಧದಲ್ಲಿ ಶಂಕಿತ ವೈದ್ಯರಾದ ಡಾ. ಉಮರ್ ನಬಿ ಮತ್ತು ಡಾ. ಮುಜಮ್ಮಿಲ್ ಅವರ ಕೋಣೆಯಿಂದ ಎರಡು ರಹಸ್ಯ ಡೈರಿಗಳು ಹಾಗೂ ಸ್ಫೋಟಕ ಕೋಡ್‌ ಸಂದೇಶಗಳು ಪತ್ತೆಯಾಗಿವೆ. ಡೈರಿಗಳಲ್ಲಿ ಆಪರೇಷನ್ ಎಂಬ ಪದವನ್ನು ಪದೇ ಪದೇ ಉಲ್ಲೇಖಿಸಿದ್ದು, ಮೊಬೈಲ್‌ ಸಂವಹನದಲ್ಲಿ ಪ್ಯಾಕೇಜ್ ಮತ್ತು ಶಿಪ್‌ಮೆಂಟ್ ಎಂಬ ಕೋಡ್‌ ಶಬ್ದಗಳಿಂದ ವಿದೇಶಿ ನಿರ್ವಾಹಕರೊಂದಿಗೆ ಸಂಪರ್ಕ ಸಾಧಿಸಿದ್ದ ಶಂಕೆ ಬಲಪಟ್ಟಿದೆ. ಈ ಕೋಡ್‌ಗಳು ಸ್ಫೋಟಕ ವಸ್ತುಗಳ ಕಳ್ಳ ಸಾಗಣೆಗೆ ಸಂಬಂಧಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೇರೆಗೆ, ಅಲ್‌ ಫಲಾಹ್ ವಿಶ್ವವಿದ್ಯಾಲಯದ ಲ್ಯಾಬ್‌ನಿಂದ ಭಾರೀ ಪ್ರಮಾಣದ ರಾಸಾಯನಿಕ ಮತ್ತು ಸ್ಫೋಟಕ ತಯಾರಿಕಾ ಬ್ಲೂಪ್ರಿಂಟ್‌ ಪತ್ತೆಯಾಗಿದ್ದು, ಕೆಲವರ ಬಂಧನ ನಡೆದಿದೆ. ಅಮೋನಿಯಂ ನೈಟ್ರೇಟ್ ಮತ್ತು ಆಕ್ಸೈಡ್‌ ಬಳಸಿಕೊಂಡು ಬಾಂಬ್‌ ತಯಾರಿಸಿದ ಸುಳಿವು ಸಿಕ್ಕಿದ್ದು, ಘಟನೆಯ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ನಂಟು ಇರುವ ಸಾಧ್ಯತೆ ಹೆಚ್ಚಿದೆ ಎಂದು ತನಿಖಾ ಸಂಸ್ಥೆಗಳು ಸ್ಪಷ್ಟಪಡಿಸಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author