ಸಂವಿಧಾನ ದಿನವೇ ಮೋದಿ ಪಂಚ್ – ನಮೋ ಕೊಟ್ಟ ಸಂದೇಶವೇನು?

ಸಂವಿಧಾನ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ‘ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಅಂಬೇಡ್ಕರ್ ಕೂಡ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ಮೋದಿ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.. ಬನ್ನಿ, ಏನಿದು ವಿವಾದ ಅಂತ ಈಗ ನೋಡೋಣ..

ಹೌದು ‘ಯಾವುದೇ ಪಕ್ಷದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಮೋದಿ, ವಿರೋಧ ಪಕ್ಷವು ‘ವಿರೋಧ ಪಕ್ಷ’ವಾಗಿ ಕೆಲಸ ಮಾಡುವ ಬದಲು ‘ಅಡಚಣೆಕಾರ ಪಕ್ಷ’ವಾಗಿ ಬದಲಾಗಿದೆ ಅಂತ ಟೀಕಿಸಿದ್ದಾರೆ. ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲುಂಡಿದ್ದನ್ನು ಪ್ರಸ್ತಾಪಿಸಿ, ಇದು ಸಂವಿಧಾನದ ಮೌಲ್ಯಗಳಿಗೆ ತೋರಿದ ಅಗೌರವ ಎಂದಿದ್ದಾರೆ. ಜೊತೆಗೆ ‘ನಾರಿ ಶಕ್ತಿಗೆ ನ್ಯಾಯ ಒದಗಿಸುವುದನ್ನು ತಡೆಯಲು ಸಾಧ್ಯವಿಲ್ಲ ಅಂತ ಭರವಸೆ ಸಹ ಕೊಟ್ಟಿದ್ದಾರೆ.

ಇನ್ನು ದೇಶವನ್ನು ಐದು ದಶಕಗಳ ಕಾಲ ಆಳಿದವರು ಸಂವಿಧಾನವನ್ನು ದುರ್ಬಲಗೊಳಿಸಿದ್ದಾರೆ ಅಂತ ಆರೋಪಿಸಿರುವ ಪ್ರಧಾನಿ, ತುರ್ತು ಪರಿಸ್ಥಿತಿಯ 42ನೇ ತಿದ್ದುಪಡಿ ಹಾಗೂ 356ನೇ ವಿಧಿಯ ದುರುಪಯೋಗದ ಬಗ್ಗೆ ಟೀಕಿಸಿದರು. ಜೊತೆಗೆ 370ನೇ ವಿಧಿ ರದ್ದಾದ ಬಳಿಕವೇ ಜಮ್ಮು-ಕಾಶ್ಮೀರದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮಹಿಳೆಯರಿಗೆ ಸಾಂವಿಧಾನಿಕ ಹಕ್ಕು ಸಿಕ್ಕಿದೆ ಅಂತ ಹೇಳಿದ್ದಾರೆ. ಇದೇ ವೇಳೆ ದೇಶದಲ್ಲಿ ಮಾವೋವಾದ ಅಂತ್ಯಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮೋದಿ, ಅಭಿವೃದ್ಧಿಯ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವ ‘ದಿಮಾಗಿ ನಕ್ಸಲರ’ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತ ಕರೆ ನೀಡಿದ್ದಾರೆ ಎಂದು ವರದಿಯಾಗಿದೆ..

ಒಟ್ಟಿನಲ್ಲಿ, ಸಂವಿಧಾನ ದಿನದ ವಿಶೇಷ ಲೇಖನದ ಮೂಲಕ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳಿಗೆ ಖಡಕ್ ತಿರುಗೇಟು ನೀಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ ಎಂದೇ ಹೇಳಬಹುದು..

About The Author