ಮದುವೆ ಅಂದ್ರೆ ಸಂಭ್ರಮ ಇರೋದು ಸಹಜ. ಆದ್ರೆ ಬಿಹಾರದ ಶಾಸಕರೊಬ್ಬರ ಮಗಳ ಮದುವೆ ಈಗ ಇಡೀ ದೇಶದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಈ ಮದುವೆಯಲ್ಲಿ ದುಡ್ಡಿನ ಹೊಳೆಯೇ ಹರಿದಿದ್ದು, ನೆಲದ ಮೇಲೆ ಬಿದ್ದಿದ್ದ ರಾಶಿ ರಾಶಿ ನೋಟುಗಳನ್ನು ಜನರು ಪೊರಕೆಯಲ್ಲಿ ಗುಡಿಸಿ ಒಟ್ಟುಗೂಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಇದು ಯಾರ ಮದುವೆ? ಅಲ್ಲಿ ನಡೆದಿದ್ದಾದ್ರೂ ಏನು?
ಹೌದು, ಬಿಹಾರದ ಮೊಕಾಮಾ ಕ್ಷೇತ್ರದ ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್ ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಮಹೋತ್ಸವ ತನ್ನ ಅದ್ಧೂರಿತನದಿಂದಲೇ ಈಗ ಭಾರಿ ಸುದ್ದಿಯಲ್ಲಿದೆ. ಪಾಟ್ನಾ ಜಿಲ್ಲೆಯ ನದವಾನ್ ಗ್ರಾಮದಲ್ಲಿರುವ ಶಾಸಕರ ಪೂರ್ವಿಕರ ಮನೆಯಲ್ಲಿ ಬುಧವಾರ ಶಿವಾಂಗಿ ಮತ್ತು ರಿಷಿಕೇಶ್ ಕುಮಾರ್ ಅವರ ವಿವಾಹ ನೆರವೇರಿತು.
ಈ ಅದ್ಧೂರಿ ಸಮಾರಂಭಕ್ಕೆ ಅತಿಥಿಗಳು ಹಾಗೂ ಕುತೂಹಲಿಗರ ದಂಡೇ ಹರಿದುಬಂದಿತ್ತು. ವಧು ಹಾಗೂ ಕುಟುಂಬಸ್ಥರಿಗೆ ದುಬಾರಿ ಉಡುಗೊರೆಗಳ ಮಹಾಪೂರವೇ ಹರಿದುಬಂದಿದ್ದು, ಮದುವೆ ಸಂಭ್ರಮದಲ್ಲಿ ಗಾಳಿಯಲ್ಲಿ ನೋಟುಗಳನ್ನು ತೂರಲಾಯಿತು. ಎಷ್ಟರಮಟ್ಟಿಗೆ ಅಂದ್ರೆ, ನೆಲದ ಮೇಲೆ ಬಿದ್ದಿದ್ದ ನೋಟುಗಳನ್ನು ಜನರು ಪೊರಕೆಯಲ್ಲಿ ಗುಡಿಸಿ ರಾಶಿ ಹಾಕಿದ್ದಾರೆ. ಆದ್ರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವು ಅಸಲಿ ನೋಟುಗಳೋ ಅಥವಾ ನಕಲಿಯೋ ಅನ್ನೋ ಚರ್ಚೆ ಕೂಡ ಶುರುವಾಗಿದ್ದು, ಆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಇನ್ನೊಂದೆಡೆ, ‘ಛೋಟೆ ಸರ್ಕಾರ್’ ಎಂದೇ ಖ್ಯಾತರಾಗಿರುವ ಶಾಸಕ ಅನಂತ್ ಸಿಂಗ್ ಅವರ ಎಂಟ್ರಿ ಕೂಡ ಸಖತ್ ಹೈಲೈಟ್ ಆಗಿತ್ತು. ಎಸ್‌ಯುವಿ ಕಾರಿನ ಸನ್‌ರೂಫ್ ಮೂಲಕ ಎದ್ದು ನಿಂತು, ಕೇಸರಿ ಶಾಲು ಬೀಸುತ್ತಾ ಮದುವೆ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟರು. ಅವರನ್ನು ನೋಡಲು ಬೆಂಬಲಿಗರು ಮುಗಿಬಿದ್ದಿದ್ದು, ಅಲ್ಲಿ ಮದುವೆ ನಡೆಯುತ್ತಿದೆಯೋ ಅಥವಾ ಯಾವುದೋ ರಾಜಕೀಯ ರೋಡ್ ಶೋ ನಡೆಯುತ್ತಿದೆಯೋ ಅನ್ನೋ ರೀತಿ ಭಾಸವಾಗುತ್ತಿತ್ತು.
ವಿಶೇಷ ಅಂದ್ರೆ, ಈ ಮದುವೆಗೆ ಬರಲು ಯಾವುದೇ ಆಮಂತ್ರಣ ಪತ್ರಿಕೆಯ ಅಗತ್ಯವಿಲ್ಲ ಅಂತ ಅನಂತ್ ಸಿಂಗ್ ಮೊದಲೇ ಘೋಷಿಸಿದ್ದರು. “ಇದೇನು ಸಿನಿಮಾ ಥಿಯೇಟರ್ ಅಲ್ಲ, ಟಿಕೆಟ್ ತಗೊಂಡು ಬರೋಕೆ. ಯಾರು ಬೇಕಾದರೂ ಬರಬಹುದು” ಅಂತ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದರು. ಅದರಂತೆ ಬಂದಿದ್ದ ಲಕ್ಷಾಂತರ ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಬಿಹಾರಿ ಖಾದ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 150ಕ್ಕೂ ಹೆಚ್ಚು ಬಗೆಯ ರುಚಿಕರ ಅಡುಗೆಗಳನ್ನು ಸಿದ್ಧಪಡಿಸಲಾಗಿತ್ತು. ಒಟ್ಟಿನಲ್ಲಿ, ದುಡ್ಡಿನ ಸುರಿಮಳೆ, 150 ಬಗೆಯ ಭೋಜನ ಮತ್ತು ಭರ್ಜರಿ ಎಂಟ್ರಿಯಿಂದ ಈ ಮದುವೆ ಈಗ ಸಖತ್ ವೈರಲ್ ಆಗಿದೆ.




