ಜೈಲಿನಲ್ಲಿದ್ದರೂ ಭರ್ಜರಿ ಗೆಲುವು, ಮೊಕಾಮಾದಲ್ಲಿ ಸಿಂಗ್ ಸಿಂಹಗರ್ಜನೆ!

ಇಲ್ಲೊಬ್ಬ ಅಭ್ಯರ್ಥಿ ಜೈಲಿನಲ್ಲೇ ಇದ್ದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. 2025ರ ಬಿಹಾರ ವಿಧಾನಸಭಾ ಚುನಾವಣೆಯ ಪ್ರಮುಖ ಹಾಟ್‌ಸೀಟ್ ಆಗಿದ್ದ ಪಾಟ್ನಾದ ಮೊಕಾಮಾ ಸ್ಥಾನದಲ್ಲಿ JD(U) ಅಭ್ಯರ್ಥಿ ಮತ್ತು ವಿವಾದಿತ ನಾಯಕ ಅನಂತ್ ಸಿಂಗ್ 28,206 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಅವರ ಮುಖ್ಯ ಪ್ರತಿಸ್ಪರ್ಧಿ, ಆರ್‌ಜೆಡಿ ಅಭ್ಯರ್ಥಿ ವೀಣಾ ದೇವಿ ಬಾಹುಬಲಿ ಸೂರಜ್‌ಭನ್ ಸಿಂಗ್ ಅವರ ಪತ್ನಿ ಎರಡನೇ ಸ್ಥಾನ ಪಡೆದಿದ್ದಾರೆ. ಚುನಾವಣಾ ಆಯೋಗ ನೀಡಿದ ಅಂಕಿಅಂಶಗಳ ಪ್ರಕಾರ, ಅನಂತ್ ಸಿಂಗ್ – 91,416 ಮತಗಳು, ವೀಣಾ ದೇವಿ – 63,210 ಮತಗಳು, JSP ಅಭ್ಯರ್ಥಿ ಪ್ರಿಯದರ್ಶಿ ಪಿಯೂಷ್ – 19,365 ಮತಗಳನ್ನ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

ಜನ ಸುರಾಜ್ ಪಕ್ಷದ ಬೆಂಬಲಿಗನ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದರೂ ಅನಂತ್ ಸಿಂಗ್ ಅವರ ಹಳಿ ತಪ್ಪದ ಜನಪ್ರಿಯತೆಯನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಮೊಕಾಮಾದಲ್ಲಿ ಇಂದು ಬೆಳಗ್ಗಿನಿಂದಲೇ ಅವರ ಬೆಂಬಲಿಗರು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಜ್ಜಾಗಿದ್ದರು.

‘ಜೈಲ್ ಕಾ ಫಾತಕ್ ಟೂಟೇಗಾ, ಹಮಾರಾ ಶೇರ್ ಚೂಟೇಗಾ’ ಎಂಬ ಪೋಸ್ಟರ್‌ಗಳು ಪ್ರದೇಶದ ಹಲವೆಡೆ ಕಾಣಿಸಿಕೊಂಡಿದ್ವು. ಅವರ ಮನೆ ಹೊರಗೆ ಸಿಹಿತಿಂಡಿ–ಅನ್ನ ಸಿದ್ಧತೆಗಳು ನಡೆಯುತ್ತಿರುವ ದೃಶ್ಯಗಳು ವೈರಲ್‌ ಆಗಿವೆ. ಅನಂತ್ ಸಿಂಗ್ 2005ರಲ್ಲಿ ಮೊಕಾಮಾ ರಾಜಕೀಯ ಪ್ರವೇಶ ಮಾಡಿ ಈಗಾಗಲೇ ಐದು ಬಾರಿ ಈ ಸ್ಥಾನ ಗೆದ್ದಿದ್ದಾರೆ.

ಹತ್ಯೆ ಪ್ರಕರಣದ ನಡುವೆಯೇ ಅನಂತ್ ಸಿಂಗ್ ಚುನಾವಣೆ ಗೆದ್ದಿದ್ದಾರೆ. ನವೆಂಬರ್ 2 ರಂದು ನಡೆದ ದುಲಾರ್ ಸಿಂಗ್ ಯಾದವ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದರೂ ಮತದಾರರು ಅನಂತ್ ಸಿಂಗ್‌ಗೇ ಬೆಂಬಲ ನೀಡಿದ್ದಾರೆ. ಯಾದವ್ — ಪ್ರಶಾಂತ್ ಕಿಶೋರ್ ನೇತೃತ್ವದ JSP ಅಭ್ಯರ್ಥಿಗಾಗಿ ಪ್ರಚಾರ ಮಾಡುವಾಗ ಸಿಂಗ್ ಗುಂಪಿನ ಜೊತೆಗಿನ ಘರ್ಷಣೆ ವೇಳೆ ಮೃತಪಟ್ಟಿದ್ದರು. ಸಿಂಗ್ ವಿರುದ್ಧ 28ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಅವರ ವಿವಾದಾಸ್ಪದ ರಾಜಕೀಯ ಜೀವನಕ್ಕೆ ಮತ್ತೊಂದು ಉದಾಹರಣೆ.

ವರದಿ : ಲಾವಣ್ಯ ಅನಿಗೋಳ

About The Author