Political News: ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಬಿಸಿಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಹಾಲು, ಹಾಲಿನ ಪದಾರ್ಥಗಳ ದರ ಹೆಚ್ಚಾಗಿದ್ದು, ಹೋಟೇಲ್ಗೆ ಹೋಗಿ 1 ಚಹಾ ಕುಡಿಯಲಿಕ್ಕೂ 3ರಿಂದ 50 ರೂಪಾಯಿ ನೀಡುವ ಪರಿಸ್ಥಿತಿ ಬಂದಿದೆ. ಇದೀಗ ಬಸ್ ಟಿಕೇಟ್ ದರ ಹೆಚ್ಚಾಗಿದೆ. ಹಬ್ಬದ ಸಮಯದಲ್ಲಿ ಬೇರೆ ಬೇರೆ ಊರಿಂದ ಊರಿಗೆ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ! ಈಗ ಬಸ್ ದರದ ಸರದಿ! ಎಂದು ಜರಿದಿದ್ದಾರೆ.
ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ 6 ರೂ, ನಿಂದ 10 ರೂ. ಅಂದರೆ ಸುಮಾರು ಶೇ. 67ರಷ್ಟು ಏರಿಕೆ! KSRTC ಯಲ್ಲಿ ಗರಿಷ್ಠ 9 ರೂ. ಏರಿಕೆ, ಒಟ್ಟಾರೆ 4 ರಿಂದ 20 ರೂ.ರವರೆಗೆ ಜನರ ಮೇಲೆ ಹೊರೆ ಹೊರಸಿರುವ ಈ ಕಾಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಿರಲಿ, ಕನಿಷ್ಠ ಮಾನವೀಯತೆಯನ್ನೂ ಕೂಡ ಉಳಿಸಿಕೊಂಡಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಎಂದು ಸಾರಿಗೆ ಸಚಿವರು ಹೇಳಿದ್ದಾರೆ!
ದುಡಿಯಲು ಹೊರಡುವ ಕಾರ್ಮಿಕ, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಹೊರಡುವ ಬಡ ರೋಗಿಗಳು, ಸಾಮಾನ್ಯ ಜನರು ನಿಮ್ಮ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕೇ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ? ಎಂದು ಸಿಎಂರನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರವಾಗಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಯಾಗಿಸಿರುವ ಸರ್ಕಾರ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
ಈ ರೀತಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಜನರ ಜೀವನವನ್ನೇ ದುಸ್ತರ ಮಾಡಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಜನಾಕ್ರೋಶವನ್ನು ಎದುರಿಸುವ ದಿನ ದೂರವಿಲ್ಲ! ಮೊದಲು ಸಾರಿಗೆ ನಿಗಮಗಳ ನಷ್ಟದ ಪೂರ್ಣ ಲೆಕ್ಕವನ್ನು ಜನರ ಮುಂದಿಡಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯಿರಿ ಎಂದು ಅತ್ಯಂತ ತೀವ್ರವಾಗಿ ಆಗ್ರಹಿಸುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.




