Political News: ಗೃಹಲಕ್ಷ್ಮೀ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕ“ಂಡಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕದ 1.27 ಕೋಟಿ ತಾಯಂದಿರಿಗೆ ಮಾಸಿಕ ₹2,000 “ಖಾತರಿ” ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳನ್ನು ಬಾಕಿ ಉಳಿಸಿಕೊಂಡು, ಪ್ರತಿಯೊಬ್ಬ ಮಹಿಳೆಗೆ ₹4,000 ಅಂದರೆ ಒಟ್ಟು ₹5,000 ಕೋಟಿ ರೂಪಾಯಿ ವಂಚಿಸಿದೆ! ಎಂದು ನಿಖಿಲ್ ಆರೋಪಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ “ತಾಂತ್ರಿಕ ದೋಷ”, “ಸರ್ವರ್ ಸಮಸ್ಯೆ” ಎಂದು ಸುಳ್ಳು ಹೇಳಿದ್ದರು. ಆದರೆ ಹೈಕೋರ್ಟ್‌ಗೆ (WP 15855/2026) ಆರ್ಥಿಕ ಇಲಾಖೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ “ಹಣಕಾಸಿನ ಅಭಾವದಿಂದ ಅನುದಾನ ಬಿಡುಗಡೆಯಾಗಿಲ್ಲ” ಎಂದು ಖಜಾನೆ ದಿವಾಳಿತನವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ!
ಚುನಾವಣೆಯಲ್ಲಿ ವೋಟಿಗಾಗಿ “ಖಾತರಿ ಹಕ್ಕು” ಎಂದಿದ್ದ ಕಾಂಗ್ರೆಸ್, ಇಂದು ಹೈಕೋರ್ಟ್‌ನಲ್ಲಿ ತನ್ನ ವಕೀಲರ ಮೂಲಕ “ಸಂಕಷ್ಟದಲ್ಲಿರುವಾಗ ಅನುದಾನ ನೀಡದಿರಲು ಸರ್ಕಾರಕ್ಕೆ ಹಕ್ಕಿದೆ, ಇದನ್ನು ಪ್ರಶ್ನಿಸಲು ಅಥವಾ ಕಾನೂನಾತ್ಮಕವಾಗಿ ಪಡೆಯಲು ಫಲಾನುಭವಿಗಳಿಗೆ ಹಕ್ಕಿಲ್ಲ” ಎಂದು ವಾದಿಸಿದೆ! ನಂಬಿ ಮತಹಾಕಿದ ತಾಯಂದಿರಿಗೆ ಮಾಡಿದ ದ್ರೋಹ ಇದು! ಎಂದು ನಿಖಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಖಜಾನೆಯ ದಿವಾಳಿತನ ಮುಚ್ಚಿಡಲು ಮತ್ತು ಅನುದಾನ ಲ್ಯಾಪ್ಸ್ ಆಗುವುದನ್ನು ತಪ್ಪಿಸಲು 31 ಮಾರ್ಚ್ 2025 ರಂದು ₹2,660.26 ಕೋಟಿ ಸಾರ್ವಜನಿಕ ಹಣವನ್ನು ನೇರ ಖಜಾನೆಯಿಂದ (Treasury DBT) ಹೊರತೆಗೆದು, ಕೆಎಸ್‌ಡಬ್ಲ್ಯೂಡಿಸಿ (KSWDC) ನಿಗಮದ ವಾಣಿಜ್ಯ ಬ್ಯಾಂಕ್ ಖಾತೆಗೆ ಅಕ್ರಮವಾಗಿ ವರ್ಗಾಯಿಸಿ ಪಾರ್ಕ್ ಮಾಡಿದ್ದಾರೆ! ಇದು ಹಣಕಾಸು ನಿಯಮಗಳ ಸಂಪೂರ್ಣ ಉಲ್ಲಂಘನೆ!
ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ, ಶಾಸನಸಭೆಗೆ ಸುಳ್ಳು ಹೇಳಿ, ರಾಜ್ಯದ 1.26+ ಕೋಟಿ ತಾಯಂದಿರಿಗೆ ಮೋಸ ಮಾಡಿರುವ ಈ ಬೊಕ್ಕಸ ಬರಿದಾದ ಸರ್ಕಾರ ಕೂಡಲೇ ಬಾಕಿ ಇರುವ ₹5,000 ಕೋಟಿ ಗೃಹಲಕ್ಷ್ಮಿ ಹಣವನ್ನು ತಾಯಂದಿರ ಖಾತೆಗೆ ಜಮಾ ಮಾಡಬೇಕು! ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ! ಎಂದು ನಿಖಿಲ್ ಎಕ್ಸ್ ಖಾತೆಯ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಯ ₹2,660.26 ಕೋಟಿ ಅನುದಾನವನ್ನು ರಾಜ್ಯ ಖಜಾನೆಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರವೇ ಆದೇಶಿಸಿದೆ. ಮತ್ತೊಂದೆಡೆ, ಆರ್ಥಿಕ ಮುಗ್ಗಟ್ಟಿನಿಂದಾಗಿ ಫೆಬ್ರವರಿ ಮತ್ತು ಮಾರ್ಚ್ 2025ರ ಗೃಹಲಕ್ಷ್ಮಿ ಕಂತುಗಳಿಗೆ ಅನುದಾನ ಬಿಡುಗಡೆ ಮಾಡಲಾಗಿಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ಒಂದೆಡೆ ಮಹಿಳೆಯರಿಗೆ ನೀಡಲು ಹಣವಿಲ್ಲ ಎಂಬ ಅಸಹಾಯಕತೆ. ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಖಜಾನೆಯಿಂದ ನಿಗಮದ ಖಾತೆಗೆ ವರ್ಗಾವಣೆ! ಈ ಹಣಕಾಸು ನಿರ್ವಹಣೆಯ ಹಿಂದಿನ ಉದ್ದೇಶವೇನು? ವರ್ಗಾಯಿಸಿದ ಹಣವನ್ನು ಹೇಗೆ ಬಳಸಲಾಗಿದೆ? ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಇದು ಆರ್ಥಿಕ ಶಿಸ್ತಿನ ಆಡಳಿತವೇ ಅಥವಾ ಆರ್ಥಿಕ ದಿವಾಳಿತನದ ಮುನ್ಸೂಚನೆಯೇ? ಎಂದು ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರ್ ಖಾರವಾಗಿಯೇ ಪ್ರಶ್ನಿಸಿದ್ದಾರೆ.




