ಪ್ರಯಾಣಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು ಸಿಲಿಕಾನ್‌ ಸಿಟಿ ನಿವಾಸಿಗಳ ದೈನಂದಿನ ಸಂಚಾರಕ್ಕೆ ಮೆಟ್ರೋ ಜೊತೆಗೆ ಬಿಎಂಟಿಸಿ ಬಸ್‌ಗಳು ಪ್ರಮುಖ ಆಧಾರವಾಗಿದೆ. ಸಮಯಕ್ಕೆ ತಕ್ಕಂತೆ ಕಚೇರಿ ಮತ್ತು ಕೆಲಸಗಳಿಗೆ ತೆರಳುವ ನಾಗರಿಕರಿಗೆ ಬಿಎಂಟಿಸಿ ಇದೀಗ ಮತ್ತೊಂದು ಮಹತ್ವದ ಸೌಲಭ್ಯ ಒದಗಿಸಿದೆ. ಇದ್ರಿಂದ ರಾಜಧಾನಿ ಜನ ಖುಷ್ ಆಗಿದ್ದಾರೆ.

ಇಷ್ಟು ದಿನ ಬೆಂಗಳೂರಿನ ನೈಸ್ ರಸ್ತೆಯಲ್ಲಿ BMTC ಬಸ್​ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರು, ಹಣ ಕೊಟ್ಟು ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡ್ತಿದ್ರು. ಅದರ ಜೊತೆಗೆ ಟೋಲ್ ದರವನ್ನೂ ಪಾವತಿ ಮಾಡ್ತಿದ್ರು. ಇದಕ್ಕೆ ರಿಲೀಫ್ ಕೊಟ್ಟಿರೋ BMTC, ನೈಸ್ ರಸ್ತೆಯಲ್ಲಿ ಸಂಚಾರ ಮಾಡೋರಿಗೆ ತಿಂಗಳ ಪಾಸ್​ನ ಭಾಗ್ಯ ಕಲ್ಪಿಸಿದೆ.

ನಾಳೆಯಿಂದಲೇ ನೈಸ್‌ ರಸ್ತೆಯಲ್ಲಿ ನೂತನ ಎಸಿ ವಜ್ರ ಬಸ್‌ಗಳು ಸಂಚಾರ ಆರಂಭಿಸಲಿದ್ದು, ಪ್ರಯಾಣಿಕರು ಇದೇ ದಿನದಿಂದ ಮಾಸಿಕ ಪಾಸ್‌ ಪಡೆಯುವ ಅವಕಾಶವನ್ನು ಬಳಸಿಕೊಳ್ಳಬಹುದು. ವಜ್ರ ಬಸ್​ಗಳಲ್ಲಿ ತಿಂಗಳ ಪಾಸ್​ಗೆ 1 ಸಾವಿರದ 904 ರೂಪಾಯಿ ದರ ನಿಗದಿ ಮಾಡಲಾಗಿದೆ.

ಪಾಸ್ ಜೊತೆ ಜೊತೆಗೆ ಟೋಲ್ ಶುಲ್ಕ 1 ಸಾವಿರದ 333 ರೂಪಾಯಿ ಹಾಗೂ ಜಿಎಸ್​ಟಿ 161 ರೂಪಾಯಿ ಸೇರಿ ಒಟ್ಟು 3 ಸಾವಿರದ 400 ರೂಪಾಯಿಗೆ ವಜ್ರ ಬಸ್​ಗಳಲ್ಲಿ ಮಾಸಿಕ ಪಾಸ್ ಅನ್ನ ಪ್ರಯಾಣಿಕರು ಪಡೆಯಬಹುದಾಗಿದೆ. ಮಾದಾವರದಿಂದ ಎಲೆಕ್ಟ್ರಾನಿಕ್‌ ಸಿಟಿ ತಲುಪಲು ಮೆಟ್ರೋ ಮೂಲಕ ಸುಮಾರು 1 ಗಂಟೆ 30 ನಿಮಿಷ ಬೇಕಾಗುತ್ತದೆ.

ಆದರೆ ನೈಸ್‌ ರಸ್ತೆಯ ಮೂಲಕ ಸಂಚರಿಸುವ ಎಸಿ ವಜ್ರ ಬಸ್‌ಗಳು ಈ ಪ್ರಯಾಣದ ಸಮಯವನ್ನು ಸುಮಾರು 20 ನಿಮಿಷ ಕಡಿತ ಮಾಡುತ್ತವೆ. ಇದರಿಂದ ಪ್ರಯಾಣಿಕರು ಕೇವಲ 1 ಗಂಟೆ 10 ನಿಮಿಷದಲ್ಲೇ ಎಲೆಕ್ಟ್ರಾನಿಕ್‌ ಸಿಟಿಗೆ ತಲುಪಲು ಸಾಧ್ಯ. ತಿಂಗಳ ಪಾಸ್‌ ಸೌಲಭ್ಯ ಜಾರಿಯಿಂದ ನಿತ್ಯ ನೈಸ್‌ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ವೆಚ್ಚ ಕಡಿಮೆ ಆಗುವುದರ ಜೊತೆಗೆ ಪ್ರಯಾಣ ಮತ್ತಷ್ಟು ಸುಲಭಗೊಳ್ಳಲಿದೆ.

ವರದಿ : ಲಾವಣ್ಯ ಅನಿಗೋಳ

About The Author