ಧರ್ಮಸ್ಥಳದ ಷಡ್ಯಂತ್ರಕ್ಕೆ ಕಾರಣ ಕೊಟ್ಟ ”ಡಿಕೆಶಿ”

ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ರಾಜಕೀಯ ತಾಪಮಾನ ಏರಿಸಿದೆ. ದೂರುದಾರರೇ ಆರೋಪಿಗಳಾಗಿ ಹೊರಬಂದಿರುವ ಚಾರ್ಜ್‌ಶೀಟ್ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿಯ ಬಾಂಬ್ ಸಿಡಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆದ ಪಿತೂರಿಗೆ ಯಾರು ಕಾರಣ ಅನ್ನೋ ಮಾಹಿತಿಯನ್ನ ಡಿಕೆಶಿ ಬಿಚ್ಚಿದ್ದಾರೆ

ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲದೇ ಈ ಷಡ್ಯಂತ್ರಕ್ಕೆ ಕಾರಣ ಏನು ಎಂದು ಸಹ ಉಲ್ಲೇಖಿಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ನೀವು ಷಡ್ಯಂತ್ರ ನಡೆದಿದೆ ಎಂದು ಈ ಹಿಂದೆ ಹೇಳಿದ್ದೀರಿ.

ಈಗ ಸಿಕ್ಕಿರುವ ಚಾರ್ಜ್ ಶೀಟ್ ನಲ್ಲಿ ದೂರುದಾರರೇ ಆರೋಪಿಗಳು ಎನ್ನುವ ಮಾಹಿತಿ ಇದೆ ಎಂದು ಕೇಳಿದಾಗ, ನನಗೆ ಧರ್ಮಸ್ಥಳದ ಇತಿಹಾಸ ಗೊತ್ತು ಹಾಗೂ ಅವರು ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ಗೊತ್ತಿತ್ತು. ಆದ ಕಾರಣಕ್ಕೆ ನಾನು ಧೈರ್ಯದಿಂದ ಈ ವಿಚಾರವನ್ನು ಹೇಳಿದ್ದೆ ಎಂದರು.

ಚಾರ್ಜ್ ಶೀಟ್ ಪ್ರತಿಯಲ್ಲಿ ಏನಿದೆ ಎಂದು ನಾನು ಓದಿಲ್ಲ. ಸರ್ಕಾರ ಕಾನೂನಿನ ಅಡಿ ಏನು ಕ್ರಮ ತೆಗೆದುಕೊಳ್ಳಬೇಕು ಅದು ನಡೆಯುತ್ತದೆ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವಿನ ಆಳವಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ” ಎಂದು ಅಚ್ಚರಿಯ ಮಾತನಾಡಿದರು.

ಇದಕ್ಕೂ ಮೊದಲು, ಆಗಸ್ಟ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ತಳ್ಳಿಹಾಕಿದರು. SIT ಈಗಾಗಲೇ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದ್ದು, SIT ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಎನ್ನಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author