Hubli: ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ನಗರ… ಕೇಂದ್ರದಲ್ಲಿ ಪ್ರಭಾವಿ ಸಚಿವರನ್ನು ಹೊಂದಿರುವ ನಗರ… ಹಿರಿಯ ರಾಜಕೀಯ ದಿಗ್ಗಜರ ನೆಲೆವೀಡು… ಇಷ್ಟೆಲ್ಲಾ ರಾಜಕೀಯ ಶಕ್ತಿ ಹೊಂದಿರುವ ಹುಬ್ಬಳ್ಳಿಯ ಹೃದಯಭಾಗದ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಸ್ಮಾರ್ಟ್ ಸಿಟಿ ಎಂಬ ಹೆಸರಿನಲ್ಲಿ ಅಭಿವೃದ್ಧಿಯ ಕನಸು ತೋರಿಸಿದ ನಗರದಲ್ಲಿ, ಚೆನ್ನಮ್ಮ ಸರ್ಕಲ್ ಸುತ್ತಮುತ್ತ ಧೂಳಿನ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ವರ್ಷಗಳು ಉರುಳಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಧೂಳು ಕುಡಿಯುತ್ತಲೇ ಬದುಕುವಂತಾಗಿದೆ ಜನರ ಪರಿಸ್ಥಿತಿ. ಹಾಗಾದರೆ ಹುಬ್ಬಳ್ಳಿಯ ಅಭಿವೃದ್ಧಿಯ ಕಥೆ ಎಲ್ಲಿ ನಿಂತಿದೆ? ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆ ಬಂದಿಲ್ಲವೇ?
ರಸ್ತೆಯ ಮೇಲೆಲ್ಲಾ ಧೂಳು… ವಾಹನಗಳು ಹಾದುಹೋದರೆ ಸಾಕು ಧೂಳಿನ ಮೋಡ… ಅಂಗಡಿಗಳಲ್ಲಿ ಧೂಳಿನ ಪದರ… ರಸ್ತೆಯಲ್ಲಿ ಓಡಾಡುವ ಜನರ ಮುಖದ ಮೇಲೆ ಧೂಳಿನ ಆವರಣ…
ಇದು ಯಾವುದೋ ನಿರ್ಜನ ಪ್ರದೇಶವಲ್ಲ. ಹುಬ್ಬಳ್ಳಿಯ ಹೃದಯಭಾಗ ಎಂದೇ ಗುರುತಿಸಿಕೊಂಡಿರುವ ಚೆನ್ನಮ್ಮ ಸರ್ಕಲ್ ಸುತ್ತಮುತ್ತಲಿನ ದುಸ್ಥಿತಿ.
ಹೌದು… ಸ್ಮಾರ್ಟ್ ಸಿಟಿ ಎಂಬ ಕನಸು ಕಂಡಿದ್ದ ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಳಂಬ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಸ್ಥಳೀಯರ ಅಳಲು.
ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಆದರೆ ಪ್ರತಿದಿನ ವಾಹನಗಳು ಓಡಾಡುತ್ತಿವೆ… ಧೂಳು ಮೇಲೇಳುತ್ತಿದೆ… ಜನರು ಅದೇ ಧೂಳಿನ ನಡುವೆ ಬದುಕು ಸಾಗಿಸುತ್ತಿದ್ದಾರೆ.
ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿಯೇ ಜನರಿಗೆ ನಿತ್ಯ ಕಿರಿಕಿರಿ ಮತ್ತು ಸಂಕಷ್ಟ ತಂದೊಡ್ಡುವಂತಾಗಿರುವುದು ವಿಪರ್ಯಾಸ.
ಇಲ್ಲಿ ಒಂದು ಗಂಭೀರ ಪ್ರಶ್ನೆ ಎದುರಾಗುತ್ತದೆ…
ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ನಗರ ಹುಬ್ಬಳ್ಳಿ. ಎಸ್.ಆರ್. ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಈ ಭಾಗದಿಂದ ಮುಖ್ಯಮಂತ್ರಿಗಳಾಗಿ ರಾಜ್ಯದ ಆಡಳಿತ ನಡೆಸಿದವರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಂತಹ ಪ್ರಭಾವಿ ನಾಯಕರು ಈ ಭಾಗದ ರಾಜಕೀಯ ಪ್ರಾತಿನಿಧ್ಯ ಹೊಂದಿದ್ದಾರೆ. ವಿಧಾನ ಪರಿಷತ್ ಸಭಾಪತಿಯಾಗಿಯೂ ಸೇವೆ ಸಲ್ಲಿಸಿರುವ ಬಸವರಾಜ ಹೊರಟ್ಟಿ ಅವರಂತಹ ಹಿರಿಯ ನಾಯಕರು ಈ ಭಾಗದಲ್ಲಿದ್ದಾರೆ.
ಇಷ್ಟೆಲ್ಲಾ ರಾಜಕೀಯ ಅನುಭವ, ಅಧಿಕಾರ ಮತ್ತು ಪ್ರಭಾವ ಹೊಂದಿರುವ ನಾಯಕರ ತವರು ಭಾಗದಲ್ಲೇ ನಗರದ ಪ್ರಮುಖ ವೃತ್ತದ ಸ್ಥಿತಿ ಹೀಗಿದ್ದರೆ, ಅಭಿವೃದ್ಧಿಯ ಭರವಸೆಗಳ ಗತಿ ಏನು?
ಮೂರು ಮುಖ್ಯಮಂತ್ರಿಗಳನ್ನು ಕೊಟ್ಟ ನಗರಕ್ಕೆ ಒಂದು ಪ್ರಮುಖ ವೃತ್ತದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲವೇ? ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರಿಗೆ ಈ ಧೂಳಿನ ಸಮಸ್ಯೆ ಕಾಣಿಸುತ್ತಿಲ್ಲವೇ? ಅಧಿಕಾರಿಗಳು ಇನ್ನೂ ಎಷ್ಟು ವರ್ಷ ಜನರನ್ನು ಕಾಯಿಸುತ್ತಾರೆ?
ಇವು ಕೇವಲ ಪ್ರಶ್ನೆಗಳಲ್ಲ… ಪ್ರತಿದಿನ ಚೆನ್ನಮ್ಮ ಸರ್ಕಲ್ ಮೂಲಕ ಓಡಾಡುವ ಸಾವಿರಾರು ಜನರ ನೋವು ಮತ್ತು ಆಕ್ರೋಶ.
ಇನ್ನು ಈ ಧೂಳಿನ ಕಾಟಕ್ಕೆ ಬಲಿಯಾಗುತ್ತಿರುವವರು ಸಾಮಾನ್ಯ ಜನರು. ಬೆಳಗ್ಗೆಯಿಂದ ಸಂಜೆವರೆಗೆ ಅಂಗಡಿಗಳಲ್ಲಿ ಕುಳಿತು ವ್ಯಾಪಾರ ಮಾಡುವವರಿಗೂ ನೆಮ್ಮದಿಯಿಲ್ಲ. ಅಂಗಡಿಯಲ್ಲಿರುವ ವಸ್ತುಗಳ ಮೇಲೆ ಧೂಳು ಸಂಗ್ರಹವಾಗುತ್ತಿದೆ. ವಾಹನ ಸವಾರರು ಮಾಸ್ಕ್ ಹಾಕಿಕೊಂಡೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಧೂಳಿನ ಸಂಪರ್ಕದಿಂದ ಕೆಮ್ಮು, ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳು ಉಲ್ಬಣಗೊಳ್ಳುವ ಆತಂಕವಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರ ಆರೋಗ್ಯದ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಅಭಿವೃದ್ಧಿ ಜನರ ಬದುಕನ್ನು ಸುಧಾರಿಸಬೇಕೇ ಹೊರತು, ಜನರ ಆರೋಗ್ಯಕ್ಕೆ ಆತಂಕ ತರುವಂತಾಗಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಜನರ ಬೇಡಿಕೆ ದೊಡ್ಡದೇನಲ್ಲ. ಮೊದಲು ಅಪೂರ್ಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ. ಅಲ್ಲಿಯವರೆಗೆ ಪ್ರತಿದಿನ ನೀರು ಸಿಂಪಡಿಸಿ ಧೂಳಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ರಸ್ತೆಯನ್ನು ಸುಗಮ ಸಂಚಾರಕ್ಕೆ ಯೋಗ್ಯವಾಗಿಸಿ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ.
ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ಕಾಮಗಾರಿ ಪೂರ್ಣಗೊಳಿಸುವ ಗಡುವನ್ನು ಪ್ರಕಟಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ನಗರ… ಕೇಂದ್ರ ಸಚಿವರನ್ನು ಹೊಂದಿರುವ ನಗರ… ಹಿರಿಯ ರಾಜಕೀಯ ದಿಗ್ಗಜರ ನೆಲೆವೀಡು… ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ ಇಂದು ತನ್ನ ಹೃದಯಭಾಗದಲ್ಲೇ ಧೂಳಿನ ಸಮಸ್ಯೆಯಿಂದ ನರಳುತ್ತಿದೆ.
ಅಭಿವೃದ್ಧಿಯ ಹೆಸರಿನಲ್ಲಿ ವರ್ಷಗಳ ಕಾಲ ಜನರನ್ನು ಕಾಯಿಸುವುದು ಯಾವ ನ್ಯಾಯ? ಸ್ಮಾರ್ಟ್ ಸಿಟಿ ಯೋಜನೆ ಜನರ ಬದುಕಿಗೆ ಅನುಕೂಲವಾಗಬೇಕೇ ಹೊರತು ಸಂಕಷ್ಟಕ್ಕೆ ತಳ್ಳಬಾರದು.
ನಾಯಕರ ರಾಜಕೀಯ ಪ್ರಭಾವ ದೊಡ್ಡದಿದೆ… ಆದರೆ ಚೆನ್ನಮ್ಮ ಸರ್ಕಲ್ನ ಧೂಳಿನ ಸಮಸ್ಯೆಗೆ ಪರಿಹಾರ ಮಾತ್ರ ಇನ್ನೂ ದೂರವೇ? ಸ್ಮಾರ್ಟ್ ಸಿಟಿ ಎಂಬ ಹೆಸರಿನ ಹುಬ್ಬಳ್ಳಿ ನಿಜವಾಗಿಯೂ ಸ್ಮಾರ್ಟ್ ಆಗುವುದು ಯಾವಾಗ?
ಇದು ಹುಬ್ಬಳ್ಳಿ ಜನತೆಯ ಪ್ರಶ್ನೆ… ಆಡಳಿತ ವ್ಯವಸ್ಥೆಗೆ ಉತ್ತರಿಸುವ ಹೊಣೆಗಾರಿಕೆ ಇದೆ.
ಕ್ಯಾಮೆರ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




