ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ಬೆನ್ನಲ್ಲೇ, ಇದೀಗ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ವಾರದೊಳಗೆ ಪಕ್ಷದ ವರಿಷ್ಠರು ಈ ಕುತೂಹಲಕ್ಕೆ ಅಂತ್ಯ ಹಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಂದುವರಿಯುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಕಳೆದ ಒಂದು ವರ್ಷದಿಂದ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಂಗಾಮಿ ಅಧ್ಯಕ್ಷರಾಗಿರುವ ವಿಜಯೇಂದ್ರ ಯಾವುದೇ ಕಾರಣಕ್ಕೂ ಮುಂದುವರಿಯುವುದಿಲ್ಲ ಎಂಬ ವಾದವನ್ನು ಪಕ್ಷದ ಒಂದು ಬಣ ಮುಂದಿರಿಸಿದರೆ, ಮತ್ತೊಂದು ಬಣ ವಿಜಯೇಂದ್ರ ತಮ್ಮ ಮುಂದುವರಿಕೆಗೆ ಪೂರ್ಣ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ಹೇಳುತ್ತಿದೆ.
ಬಿಜೆಪಿ ಮೂಲಗಳ ಪ್ರಕಾರ, ವಿಜಯೇಂದ್ರ ಮುಂದುವರಿಯುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದರೆ, ಅವರ ಮುಂದುವರಿಕೆ ಯಾವ ಸ್ವರೂಪದಲ್ಲಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಂಗಾಮಿ ಸ್ಥಿತಿಯನ್ನೇ ಮುಂದುವರಿಸಿ ಮತ್ತೊಂದು ವರ್ಷ ವಿಸ್ತರಣೆ ನೀಡಲಾಗುತ್ತದೆಯೋ ಅಥವಾ ಹೊಸ ನೇಮಕ ಪ್ರಕ್ರಿಯೆ ನಡೆಸಿ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಮತದಾರರಾಗಿ ಪಾಲ್ಗೊಳ್ಳುವರೋ ಎಂಬುದು ಇತ್ಯರ್ಥವಾಗಬೇಕಿದೆ.
ಇತ್ತೀಚೆಗೆ 45 ವರ್ಷದ ನಿತಿನ್ ನಬೀನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ವರಿಷ್ಠರು ರಾಷ್ಟ್ರಮಟ್ಟದಲ್ಲಿ ಅಚ್ಚರಿ ಮೂಡಿಸಿದ್ದರು. ಇದೇ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರನ್ನು ಮರು ಆಯ್ಕೆ ಮಾಡುವ ಮೂಲಕ ವರಿಷ್ಠರು ರಾಜ್ಯ ಮಟ್ಟದಲ್ಲೂ ಅಚ್ಚರಿಯ ಹೆಜ್ಜೆ ಇಡಬಹುದು ಎಂಬುದು ವಿಜಯೇಂದ್ರ ಬೆಂಬಲಿಗರ ವಾದವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




