Political News: ನೀಟ್ ಪರೀಕ್ಷೆಯಲ್ಲಾದ ಸಮಸ್ಯೆಗಳು ಇನ್ನು ಮುಂದೆ ಪುನರಾವರ್ತಿಸಬಾರದು ಎಂದು ಈ ಹಿಂದೆ ಆಧಾರ್ ಕಂಡುಬಿಡಿದಿದ್ದ ನಂದನ್ ನಿಲೇಕಣಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ.
ಆದರೆ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ಅವರು, ಈ ಬಗ್ಗೆ ಕಿಡಿಕಾರಿದ್ದು, ಈ ಹಿಂದೆ ತೆಗಳಿದವರನ್ನೇ ನೀವು ಈ ಕೆಲಸಕ್ಕೆ ನೇಮಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಹರಿಪ್ರಸಾದ್ ಅವರ ಆರೋಪವೇನೆಂದರೆ, ಈ ಹಿಂದೆ ಪ್ರಧಾನ ಮಂತ್ರಿಯವರು ನಂಂದನ್ ನಿಲೇಕಣಿಯವರನ್ನು ಗುರುತೇ ಇಲ್ಲದ ಕೋಟ್ಯಾಧಿಪತಿ ಎಂದು ಕರೆದಿದ್ದರಂತೆ. ಹೀಗೆ ಹೇಳಿದ ಬಳಿಕವೂ ಅವರನ್ನೇ ನೀವು ಏಕೆ ಈ ಮುಖ್ಯ ಕೆಲಸಕ್ಕೆ ನೇಮಿಸಿದ್ದೀರಿ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ನಿಂದಿಸಿದವರನ್ನೇ ನೆಚ್ಚಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಗೂ , ಬಿಜೆಪಿ ಪಕ್ಷಕ್ಕೂ ಹೊಸದೇನಲ್ಲ. “ಗುರುತೇ ಇಲ್ಲದ ಕೋಟ್ಯಧಿಪತಿ” ಎಂದು ಚುನಾವಣಾ ವೇದಿಕೆಯಲ್ಲಿ ನಂದನ್ ನಿಲೇಕಣಿ ಅವರನ್ನು ವೈಯಕ್ತಿಕವಾಗಿ ಅವಹೇಳನ ಮಾಡಿದ್ದನ್ನು ಪ್ರಧಾನಿಗಳು ಮರೆತಿರಬಹುದು, ದೇಶದ ಜನ ಮರೆತಿಲ್ಲ.
ನಿಲೇಕಣಿಯವರು ರೂಪಿಸಿದ ಆಧಾರ್ ಯೋಜನೆಯನ್ನು ‘ಸಾರ್ವಜನಿಕ ಹಣದ ಲೂಟಿ’, ‘ವ್ಯರ್ಥ ಯೋಜನೆ’, ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಅಪಪ್ರಚಾರ ಮಾಡಿದ್ದವರು ಇದೇ ಬಿಜೆಪಿ ನಾಯಕರು. ಆದರೆ ಇಂದು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸುವ ಉನ್ನತಾಧಿಕಾರ ಸಮಿತಿಯ ಚುಕ್ಕಾಣಿಯನ್ನು ಅದೇ ನಂದನ್ ನಿಲೇಕಣಿಯವರ ಕೈಗೆ ಒಪ್ಪಿಸಿದ್ದಾರೆ! ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಮಂತ್ರಿಗಳೇ, ನಂದನ್ ನಿಲೇಕಣಿಯವರಿಗೆ ಈಗ ಏಕಾಏಕಿ “ಗುರುತು” ದೊರಕಿದೆಯೇ? ಅಥವಾ ನೀವು ಹಿಂದೆ ಮಾಡಿದ್ದ ಆರೋಪಗಳಿಗೇ ಇಂದು ಗುರುತೇ ಉಳಿದಿಲ್ಲವೇ? ಅಂದಿನ ಆರೋಪಗಳು ಸತ್ಯವಾಗಿದ್ದರೆ, ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅವರ ಕೈಗೆ ಒಪ್ಪಿಸಿರುವುದು ಏಕೆ? ಹಿಂದಿನ ಆರೋಪಗಳು ಸುಳ್ಳಾಗಿದ್ದರೆ, ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಸಾಧಕನ ವಿರುದ್ಧ ನಡೆಸಿದ ವೈಯಕ್ತಿಕ ಅವಹೇಳನಕ್ಕಾಗಿ ಕ್ಷಮೆ ಕೇಳುವುದು ಯಾವಾಗ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದೊಂದಿಗೆ ಗುರುತಿಸಿಕೊಂಡಾಗ ದೇಶದ ಪ್ರತಿಭೆಯನ್ನು ಅವಮಾನಿಸುವುದು; ತಮ್ಮ ಆಡಳಿತದ ವೈಫಲ್ಯವನ್ನು ಸರಿಪಡಿಸಬೇಕಾದಾಗ ಅದೇ ಪ್ರತಿಭೆಯ ಬಾಗಿಲು ತಟ್ಟುವುದು ಇದು ನಾಯಕತ್ವವಲ್ಲ, ಅವಕಾಶವಾದದ ಅಶ್ಲೀಲ ಪ್ರದರ್ಶನ. ನಂದನ್ ನಿಲೇಕಣಿಯವರ ಸಾಮರ್ಥ್ಯದ ಬಗ್ಗೆ ನಮಗೆ ಪ್ರಶ್ನೆಯಿಲ್ಲ. ಪ್ರಶ್ನೆ ಇರುವುದು ನರೇಂದ್ರ ಮೋದಿಯವರ ರಾಜಕೀಯ ಪ್ರಾಮಾಣಿಕತೆಯ ಬಗ್ಗೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಲು ಸಮಿತಿ ನೇಮಿಸುವ ಮೊದಲು, ನಿಮ್ಮ ಹಿಂದಿನ ಆರೋಪಗಳ ಪರೀಕ್ಷೆಗೆ ಉತ್ತರಿಸಿ ಪ್ರಧಾನಿಗಳೇ ಎಂದು ಬಿ.ಕೆ.ಹರಿಪ್ರಸಾಾದ್ ಆಗ್ರಹಿಸಿದ್ದಾರೆ.




