ಮಂಜು–ಮಾಲಿನ್ಯ ದೆಹಲಿ ಅಸ್ತವ್ಯಸ್ತ : 228 ವಿಮಾನ ರದ್ದು – 300 ತಡ!

ರಾಷ್ಟ್ರರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ತೀವ್ರವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಟ್ಟ ಮಂಜು ಮತ್ತು ಅತೀ ಕಡಿಮೆ ದೃಶ್ಯಮಾನತೆಯಿಂದಾಗಿ 228 ವಿಮಾನಗಳು ರದ್ದಾಗಿದ್ದು, 300ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ.

ದೆಹಲಿಯ ಜಹಂಗೀರ್‌ಪುರಿ, ರೋಹಿಣಿ ಹಾಗೂ ವಾಜಿರ್ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 500 ಅಂಕಗಳ ಗಡಿ ದಾಟಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚಿದ್ದು, ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದಾಗಿ 5 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಪ್ರಯಾಣಿಕರ ಸಹಾಯಕ್ಕಾಗಿ ಎಲ್ಲಾ ಟರ್ಮಿನಲ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಡಿಐಎಎಲ್ ತಿಳಿಸಿದೆ.

ವಾಯುಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ ಡಿಸೆಂಬರ್ 17ರಂದು ವಿಚಾರಣೆ ನಡೆಸಲಿದೆ. ದೆಹಲಿ ಹೈಕೋರ್ಟ್ ವಕೀಲರು ಹಾಗೂ ಕಕ್ಷಿದಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಸೂಚಿಸಿದೆ. ಇನ್ನೊಂದೆಡೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟ ಮಂಜಿನಿಂದಾಗಿ 48 ವಿಮಾನಗಳ ಆಗಮನ ವಿಳಂಬವಾಗಿದೆ. ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14.6 ಡಿಗ್ರಿ ಸೆಲ್ಸಿಯಸ್, ಇದು ಸರಾಸರಿಗಿಂತ ಕಡಿಮೆಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author