ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಖಂಡಿತ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತೆ. ನಾಳೆಯಿಂದ ಅಂದರೆ ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಹಾಗೂ ಹೊಸ ನಿಯಮಗಳು ಜಾರಿಗೆ ಬರ್ತಿವೆ. ಹಾಗಾದ್ರೆ ಆ ಬಿಗ್ ಚೇಂಜಸ್ ಏನು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಮೊದಲನೆಯದಾಗಿ, ಪ್ರತಿ ತಿಂಗಳ ಮೊದಲ ತಾರೀಖಿನಂತೆ ತೈಲ ಕಂಪನಿಗಳು ಹೊಸ ಸಿಲಿಂಡರ್ ಬೆಲೆಗಳನ್ನು ಪ್ರಕಟಿಸುತ್ತವೆ. ಈ ಬಾರಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಅನಿಲ ರವಾನೆಗೆ ತೊಂದರೆಯಾಗಿರೋದ್ರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಗ್ಯಾಸ್ ಬೆಲೆ ಭಾರಿ ಏರಿಕೆಯಾಗಿದೆ. ಹೀಗಾಗಿ ನಾಳೆಯಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಸಹ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೇಳಿಬಂದಿದೆ. ಇದು ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಲಿದೆ.
ಎರಡನೆಯದಾಗಿ, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ವಿಚಾರದಲ್ಲೂ ಮಹತ್ವದ ಬದಲಾವಣೆ ಜಾರಿಯಲ್ಲಿದೆ. ಈ ಹಿಂದೆ ವರ್ಷಕ್ಕೆ 6 ಸಿಲಿಂಡರ್‌ಗಳವರೆಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಈಗ ಕೇವಲ 4 ಸಿಲಿಂಡರ್‌ಗಳಿಗೆ ಇಳಿಸಲಾಗಿದೆ. ಅಂದರೆ, ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗಳಿಗೆ ಮಾತ್ರ ಮೂರು ನೂರು ರೂಪಾಯಿ ಸಬ್ಸಿಡಿ ಸಿಗುತ್ತೆ; ಒಂದು ವೇಳೆ ಆ ಮಿತಿ ಮೀರಿದರೆ ಗ್ರಾಹಕರು ಪೂರ್ಣ ಹಣವನ್ನು ಪಾವತಿಸಬೇಕಾಗುತ್ತದೆ.
ಮೂರನೆಯದಾಗಿ, ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸೌಲಭ್ಯವಿರುವ ಪ್ರದೇಶದ ಗ್ರಾಹಕರಿಗೆ ‘ಒಂದು ಕುಟುಂಬಕ್ಕೆ ಒಂದೇ ಸಂಪರ್ಕ’ ನಿಯಮ ಕಟ್ಟುನಿಟ್ಟಾಗಿ ಅನ್ವಯವಾಗುತ್ತದೆ. ಅಂದರೆ ನೀವು ಎಲ್‌ಪಿಜಿ ಅಥವಾ ಪಿಎನ್‌ಜಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಬಳಸಬೇಕು, ಎರಡನ್ನೂ ಒಟ್ಟಿಗೆ ಇಟ್ಟುಕೊಳ್ಳಲು ಅವಕಾಶವಿರುವುದಿಲ್ಲ. ಹಾಗಾಗಿ ನಾಳೆಯಿಂದ ಜಾರಿಗೆ ಬರುವ ಈ ಹೊಸ ರೂಲ್ಸ್ ಬಗ್ಗೆ ಪ್ರತಿಯೊಬ್ಬ ಗ್ಯಾಸ್ ಗ್ರಾಹಕರು ಎಚ್ಚರ ವಹಿಸುವುದು ಅತ್ಯಂತ ಅವಶ್ಯಕವಾಗಿದೆ.




