ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪುನರ್ ಪರಿಶೀಲನಾ (SIR) ಪ್ರಕ್ರಿಯೆ ಪೂರ್ಣವಾಗಿದೆ. ಕರಡು ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆಗಳು ಜಾರಿ ಇದ್ದವು. ಆದಾಗ್ಯೂ, ಸುಮಾರು 2.89 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಡಿ.26 ರ ಮಧ್ಯರಾತ್ರಿ 12 ಗಂಟೆಯೇ SIR ಪ್ರಕ್ರಿಯೆಯ ಕೊನೆಯ ದಿನಾಂಕವಾಗಿತ್ತು. ಈ ವೇಳೆಯೊಳಗೆ ತಮ್ಮ ಮಾಹಿತಿಯನ್ನು ಸಲ್ಲಿಸದ ಮತದಾರರನ್ನು ನಿರ್ದಿಷ್ಟ ವರ್ಗದಲ್ಲಿ ಇಡಲಾಗಿದೆ. ಒಟ್ಟಾ ಮತದಾರರ ಪಟ್ಟಿಯಲ್ಲಿ ಶೇ. 18.7 ರಷ್ಟು ಮಂದಿ ವಿವರಗಳಿಲ್ಲದ ಕಾರಣ ಪಟ್ಟಿಗೆ ಸೇರಿಸಲಾಗಿಲ್ಲ.
ಈ 2.89 ಕೋಟಿ ಮತದಾರರಲ್ಲಿ ಸುಮಾರು 1.25 ಕೋಟಿ ಜನರು ಶಾಶ್ವತವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇವನ್ನು ತಪ್ಪದೇ ಪರಿಶೀಲಿಸಲಾಗುತ್ತಿದೆ. 45.95 ಲಕ್ಷ ಮತದಾರರು ಮೃತಪಟ್ಟಿದ್ದಾರೆ ಮತ್ತು 23.59 ಲಕ್ಷ ಮತದಾರರು ನಕಲಿ ಎಂದು ಕಂಡು ಬಂದಿದೆ.
ಲಖನೌ, ಮಲಿಹಾಬಾದ್ ಮತ್ತು ಮೋಹನ್‌ಲಾಲ್ ಗಂಜ್ ನ 9 ವಿಧಾನಸಭೆ ಕ್ಷೇತ್ರಗಳಲ್ಲಿ ಶೇ. 83ಕ್ಕೂ ಹೆಚ್ಚಿನ ಎಸ್‌ಐಆರ್ ನಮೂನೆಗಳು ಸಲ್ಲಿಕೆಯಾಗಿವೆ. ಕರಡು ಮತದಾರರ ಪಟ್ಟಿ ತಯಾರಿ ನಡೆಯುತ್ತಿದ್ದು ಡಿಸೆಂಬರ್ 31 ರಂದು ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಕೆಗೆ ಡಿಸೆಂಬರ್ 31 ರಿಮದ 2026ರ ಜನವರಿ 30 ರವರೆಗೆ ಅವಕಾಶವಿರಲಿದೆ. 2026ರ ಫೆಬ್ರವರಿ 28 ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
9.57 ಲಕ್ಷ ಮತದಾರರು ತಮ್ಮ ಅರ್ಜಿಗಳನ್ನು ಸಲ್ಲಿಸಿಲ್ಲ, ಸುಮಾರು 84 ಲಕ್ಷ ಮತದಾರರು ಕಾಣೆಯಾಗಿದ್ದಾರೆ ಎಂದು ಗುರುತಿಸಲಾಗಿದೆ. ರಾಜಧಾನಿ ಲಖನೌನಲ್ಲಿ ಈ ಹಿಂದೆ ಸುಮಾರು 40 ಲಕ್ಷ ಮತದಾರರಿದ್ದರು, ಇಲ್ಲಿಯವರೆಗೆ ಶೇ. 70 ರಷ್ಟು ಮತದಾರರು ಮಾತ್ರ ತಮ್ಮ ಎಸ್‌ಐಆರ್ ನಮೂನೆ ಸಲ್ಲಿಸಿದ್ದಾರೆ. ಲಖನೌನಲ್ಲಿ 5.36 ಲಕ್ಷ ನಕಲಿ ಮತದಾರರು ಸೇರಿ 12 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ.




