ಬಾಂಗ್ಲಾದಲ್ಲಿ 24 ಗಂಟೆಗಳಲ್ಲಿ ಮತ್ತೆ ಇಬ್ಬರು ಹಿಂದೂಗಳ ಹತ್ಯೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಕಿರುಕುಳ ಮತ್ತು ಹಿಂಸಾಚಾರ ಮುಂದುವರಿದಿದೆ. ನಡೆಯುತ್ತಿರುವ ಅಶಾಂತಿಯ ನಡುವೆ, ಹಿಂದೂ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ಘಟನೆಯಲ್ಲಿ, ಮಣಿ ಚಕ್ರವರ್ತಿ ಎಂಬ ಹಿಂದೂ ವ್ಯಕ್ತಿಯನ್ನು ಅಪರಿಚಿತ ದಾಳಿಕೋರರು ಇರಿದು ಕೊಂದಿದ್ದಾರೆ.

ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲ್ಲೆಯ ಚಾರ್ಸಿಂದೂರ್ ಮಾರುಕಟ್ಟೆಯಲ್ಲಿ ಮಣಿ ಚಕ್ರವರ್ತಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಅಂಗಡಿಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಹಠಾತ್ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಣಿ ಚಕ್ರವರ್ತಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯೆ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಹಿಂದೂ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಎರಡನೇ ಹತ್ಯೆ ಇದಾಗಿದ್ದು, ಈ ಘಟನೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆ ಕುರಿತಾಗಿ ತೀವ್ರ ಚಿಂತೆ ಹುಟ್ಟಿಸಿದೆ. ಈ ದಾಳಿಗೆ ಸಂಬಂಧಿಸಿದಂತೆ ಇನ್ನೂ ದಾಳಿಕೋರರನ್ನು ಗುರುತಿಸಲಾಗಿಲ್ಲ. ಆಡಳಿತದ ವತಿಯಿಂದ ಈ ಕುರಿತು ಅಧಿಕೃತ ಹಾಗೂ ವಿವರವಾದ ಹೇಳಿಕೆ ಇನ್ನೂ ಹೊರಬಿದ್ದಿಲ್ಲ.

ಶೇಖ್ ಹಸೀನಾ ಸರ್ಕಾರ ಪದಚ್ಯುತಗೊಂಡ ಬಳಿಕ, ಬಾಂಗ್ಲಾದೇಶದಲ್ಲಿ ಮೂಲಭೂತವಾದಿ ಸಂಘಟನೆಗಳು ಹೆಚ್ಚು ಸಕ್ರಿಯವಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಇನ್ನೂ ಕೆಲವೆಡೆ ವೈಯಕ್ತಿಕ ದ್ವೇಷದ ಕಾರಣಕ್ಕೂ ಹಿಂದೂ ಸಮುದಾಯದ ಸದಸ್ಯರ ಮೇಲೆ ದಾಳಿಗಳು ನಡೆಯುತ್ತಿರುವುದಾಗಿ ವರದಿಯಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author