ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 26 ಆರೋಪಿಗಳ ಪೈಕಿ 25 ಮಂದಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಖಾಸಗಿ ಅಂಗರಕ್ಷಕ ಗುರುಚರಣ್ ಸಿಂಗ್ಗೆ ಮಾತ್ರ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಬೆಂಗಳೂರು ನಗರದ 42ನೇ ಹೆಚ್ಚುವರಿ ವಿಶೇಷ ನ್ಯಾಯಾಲಯವು ಬಂಧಿತ ಎರಡೂ ಗುಂಪಿನ ಆರೋಪಿಗಳಿಗೆ ಶುಕ್ರವಾರ ಜಾಮೀನು ನೀಡುವಂತೆ ಆದೇಶ ಹೊರಡಿಸಿದೆ.
ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.ಪ್ರಕರಣದ ವೇಳೆ ಸತೀಶ್ ರೆಡ್ಡಿಯ ಅಂಗರಕ್ಷಕನಿಂದ ಬುಲೆಟ್ ಫೈರ್ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಗುರುಚರಣ್ ಸಿಂಗ್ಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಈ ಗಲಾಟೆಗೆ ಸಂಬಂಧಿಸಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.
ಗಲಾಟೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಸೇರಿ ಒಟ್ಟು 67 ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಪೈಕಿ ಬಿಜೆಪಿಯ 33 ಮತ್ತು ಕಾಂಗ್ರೆಸ್ನ 34 ಮುಖಂಡರಿಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ನ 107ನೇ ವಿಧಿ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ನೋಟಿಸ್ ಪಡೆದವರಲ್ಲಿ ಜಿ. ಜನಾರ್ದನ ರೆಡ್ಡಿ, ಭರತ್ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಪ್ರತಾಪ್ ರೆಡ್ಡಿ ಸೇರಿದಂತೆ ಪ್ರಮುಖ ನಾಯಕರು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ಅವರ ಮೃತದೇಹವನ್ನು ಮಣ್ಣಲ್ಲಿ ಹೂಳದೇ, ಗ್ಯಾಸ್ ಬಳಸಿ ದಹನಗೊಳಿಸುವ ಮೂಲಕ ಸಾಕ್ಷ್ಯ ನಾಶ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮದುವೆಗೆ ಮುನ್ನ ಮೃತಪಟ್ಟರೆ ದೇಹವನ್ನು ಸುಡುವ ಸಂಪ್ರದಾಯವಿದೆ ಎಂಬ ಕುಟುಂಬಸ್ಥರ ಹೇಳಿಕೆಯ ಹಿಂದೆ ಶಾಸಕರ ಬೆಂಬಲಿಗರ ಒತ್ತಡವಿದೆ ಎಂದು ಆರೋಪಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




