Mandya News: ಮಂಡ್ಯ: ಮನರೇಗಾ ಯೋಜನೆಯ ರೂಪ ಬದಲಾಯಿಸಿ ಹೆಸರನ್ನೂ ಬದಲಿಸಲು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಕೈಗೊಂಡಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ತಜ್ಞ ಮನ್ಮೋಹನ್ ಸಿಂಗ್ ಅವರು ಜಾರಿಗೆ ತಂದ ಮನರೇಗಾ ಯೋಜನೆಯನ್ನು ಕಳೆದ ೨೦ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತದೆ. ಈ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರಿಗೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿಕ ಬದುಕು, ಆಸ್ತಿಗಳ ರಕ್ಷಣೆ, ಸ್ವತ ಸಮಸ್ಯೆಗಳ ನಿವಾರಣೆ, ಕನಷ್ಠ ಕೂಲಿ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಒದಗಿಸುವ ಯೋಜನೆಯಾಗಿತ್ತು ಎಂದರು.
ಹಿಂದೆಯೂ ಈ ಯೋಜನೆಯನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿತ್ತು. ಆದರೆ ಸಾಕಷ್ಟು ಹೋರಾಟಗಳ ಫಲವಾಗಿ ಈ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು. ಅಡಚಣೆ ಇದ್ದರೂ ಮನರೇಗಾ ಯೋಜನೆ ಸುಲಲಿತವಾಗಿ ಸಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಯೋಜನೆಯ ಜೊತೆಗೆ ಹೆಸರನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಹೇಳಿದರು.
ಯೋಜನೆ ಬದಲಿಸುವ ಸಂಬಂಧ ಸುರ್ಧೀಘ ಚರ್ಚೆಗಳು ನಡೆದಿಲ್ಲ. ಯಾವುದೇ ರಾಜ್ಯಕ್ಕೂ ಪತ್ರ ಬರೆದು ಅಭಿಪ್ರಾಯ ಕೇಳಿಲ್ಲ. ಗ್ರಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿಲ್ಲ. ಜನರ, ಜನ ಪ್ರತಿನಿಧಿಗಳ ವಿಶ್ವಾಸ ಗಳಿಸದೇ, ಲೋಕಸಭೆಯಲ್ಲೂ ಚರ್ಚೆಗೆ ಅವಕಾಶ ನೀಡದೇ ರಾಷ್ಟ್ರೀಯ ಮಟ್ಟದ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ದೂರಿದರು.




