Political News: ರಾಜ್ಯದ ಕೆಲವು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ಗಳಿಗೆ 3 ತಿಂಗಳಿಂದ ಸಂಬಳವಾಗಿಲ್ಲ. ಈ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ನಿಖಿಲ್ ಕುಮಾರ್, ದಿನನಿತ್ಯ ರಾಜ್ಯದ ಜನರ ಸೇವೆ ಮಾಡುವ ನರ್ಸ್ ಗಳಿಗೆ ವೇತನ ನೀಡುವುದಕ್ಕೂ ದಿವಾಳಿ ಭಾಗ್ಯಗಳ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. 20 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ 30,000 ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಮೂರು ತಿಂಗಳಿಂದ ವೇತನವಿಲ್ಲದೇ ಗೋಳಾಡುತ್ತಿದ್ದಾರೆ. ಅವರ ಅಳಲನ್ನು ಕೇಳಬೇಕಾದ ಸರ್ಕಾರ ಕುರ್ಚಿ ಗಲಾಟೆಯಲ್ಲಿ ಮೈಮರೆತಿದೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಸರ್ಕಾರ ದಿವಾಳಿಯಾಗಿಲ್ಲ, ನಮ್ಮ ಖಜಾನೆ ತುಂಬಿ ತುಳುಕುತ್ತಿದೆ ಎಂಬ ಹಸಿ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ, ಈ ಕೂಡಲೇ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸುತ್ತೇನೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ರೋಗಗ್ರಸ್ತ ಆಡಳಿತದಿಂದಾಗಿ ಜನಸಾಮಾನ್ಯರ ಜೊತೆಗೆ ಸರ್ಕಾರಿ ಸೇವಕರು ಕೂಡ ಹೈರಾಣಾಗಿದ್ದಾರೆ. ಈ ದಿವಾಳಿ ಅಂಚಿನಲ್ಲಿರುವ ಕಾಂಗ್ರೆಸ್ ಸರ್ಕಾರ ಆರೋಗ್ಯ ಸೇವೆಯ ಬೆನ್ನೆಲುಬಾದ 30,000 ನರ್ಸ್ ಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಲಾಗದೆ ಅಮಾನವೀಯವಾಗಿ ವರ್ತಿಸುತ್ತಿದೆ. ಇನ್ನೊಂದೆಡೆ, 980 ಗ್ರಾಮ ಪಂಚಾಯತ್ PDO ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಸಾಧ್ಯವಾಗದೆ ಗ್ರಾಮೀಣಾಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ.
ಬರೀ ಭ್ರಷ್ಟಾಚಾರ, ಓಲೈಕೆ ರಾಜಕೀಯ, ಪ್ರಚಾರದ ಗ್ಯಾರಂಟಿ, ಕುರ್ಚಿ ಕಾಳಗ, ಕೇಂದ್ರದ ಜೊತೆಗೆ ರಾಜಕೀಯ ಸಂಘರ್ಷಗಳಲ್ಲೇ ಮಗ್ನವಾಗಿರುವ ಸರ್ಕಾರಕ್ಕೆ ಜನರ ನಿಜವಾದ ನೋವುಗಳು ಕಾಣಿಸುತ್ತಿಲೇ ಇಲ್ಲ. ಶ್ರಮಜೀವಿಗಳಿಗೆ ಅದರಲ್ಲೂ ಆರೋಗ್ಯ ಸೇವೆಯಲ್ಲಿರುವವರಿಗೆ ಕನಿಷ್ಠ ಸಂಬಳ ನೀಡಲಾಗದೆ ಇರುವುದು ನಾಚಿಕೆಗೇಡು.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಾಕಿ ವೇತನ ಬಿಡುಗಡೆ ಮಾಡಲಿ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಜಡಗಟ್ಟಿರುವ ಆಡಳಿತ ಯಂತ್ರಕ್ಕೆ ಸ್ವಲ್ಪವಾದರೂ ಜೀವ ತುಂಬಲಿ. ಶ್ರಮಿಕರ ಕಣ್ಣೀರು ಮತ್ತು ಹಳ್ಳಿಗಳ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಈ ಕಾಂಗ್ರೆಸ್ ಸರ್ಕಾರ ಹೊಣೆ ಹೊರಲೇಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ಬಗ್ಗೆ ಕಿಡಿಕಾರಿದ್ದು, ನರ್ಸ್ ಗಳಿಗೆ ವೇತನ ನೀಡುವುದಕ್ಕೂ ದಿವಾಳಿ ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ!! ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ 30,000 ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ 3 ತಿಂಗಳಿಂದ ಸಂಬಳವಾಗಿಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರ ತುಂಬಿ ತುಳುಕುತ್ತಿರುವ ಬೊಕ್ಕಸದ ಅಸಲಿ ಹಣೆಬರಹ. ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೆ, ಕರ್ನಾಟಕ ದಿವಾಳಿಯಾಗಿಲ್ಲ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಿ, ಕೂಡಲೇ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿ್ದಾರೆ.




