Political News: ಅಕ್ರಮ ವಲಸಿಗರ ಶೆಡ್‌ಗಳಿಗೆ ಹೋಗಿ ಶೋಧ ಮಾಡಿರುವ ಕಾರಣಕ್ಕೆ, ಪುನೀತ್ ಕೆರೆಹಳ್ಳಿ ಬಂಧನವಾಗಿದ್ದು, ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಬಂಧಿಸಲಾಗಿದೆ.
ಈ ಬಂಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದುಷ್ಟ ಅಪರಾಧಿಗಳಿಗೆ ಅಭಯ ನೀಡುತ್ತಾ, ಸಮಾಜ ಪರ ಹೋರಾಟಗಾರರನ್ನು ಹತ್ತಿಕ್ಕುವ ದಮನಕಾರಿ ನೀತಿಯೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಲಿಖಿತ ನಿಯಮವಾದಂತಿದೆ. ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವುದು ಖಂಡನೀಯ, ಇದು ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ತನ್ನ ತುಷ್ಟೀಕರಣ ಮತ್ತು ಓಲೈಕೆ ರಾಜಕೀಯಕ್ಕಾಗಿ, ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿಯ ವಿರುದ್ಧ ದನಿಯೆತ್ತಿ, ಸಮಾಜದ ಸುರಕ್ಷತೆಗಾಗಿ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಮಾಡುತ್ತಿರುವವರನ್ನು ಬಂಧಿಸಿದೆ. ಹಿಂದೂ ಪರವಾಗಿ, ಸಮಾಜದ ಸುರಕ್ಷತೆಗಾಗಿ ನಿಲ್ಲುವವರ ಮೇಲೆ ಪೊಲೀಸ್ ಬಲಪ್ರಯೋಗಿಸಿ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನೊಂದೆಡೆ, ಮಹಿಳಾ ಸರ್ಕಾರಿ ಅಧಿಕಾರಿಗೆ ಅಸಭ್ಯವಾಗಿ ಬೈದು, ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಲೆಮರೆಸಿಕೊಂಡಿದ್ದರೂ ಪೊಲೀಸರಿಗೆ ಆತನ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ! ಸ್ವಪಕ್ಷದ ಅಪರಾಧಿಗಳಿಗೆ ರಾಜಾತಿಥ್ಯ, ಸಮಾಜದ ಹಿತ ಬಯಸುವವರ ಮೇಲೆ ದಮನಕಾರಿ ನೀತಿ – ಇದೇ ಈ ಕಾಂಗ್ರೆಸ್ ಸರ್ಕಾರದ ನಾಚಿಕೆಗೇಡಿನ ಆಡಳಿತ ವೈಖರಿ. ರಾಜ್ಯ ಸರ್ಕಾರ ತನ್ನ ಪಕ್ಷಪಾತ ಧೋರಣೆಯನ್ನು ಕೈಬಿಟ್ಟು, ಕಾನೂನು ಎಲ್ಲರಿಗೂ ಸಮಾನವಾಗಿರುವಂತೆ ನೋಡಿಕೊಳ್ಳದಿದ್ದರೆ, ಸಂವಿಧಾನಾತ್ಮಕ ಹಕ್ಕುಗಳ ದಮನದ ವಿರುದ್ಧ ರಾಜ್ಯದ ಜನತೆ ಬೀದಿಗಿಳಿದು ಹೋರಾಡಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.




