ಬಿಜೆಪಿ v/s ಕಾಂಗ್ರೆಸ್ ಗದ್ದಲ ಸದನದಲ್ಲಿ ಶೇಮ್… ಶೇಮ್

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಚುಟುಕು ಭಾಷಣ ಮುಗಿಸಿ ಹೊರನಡೆದ ವೇಳೆ ಅವರಿಗೆ ತಡೆದು ಅಗೌರವ ತೋರಿದ್ದಾರೆ ಎನ್ನುವ ಆರೋಪದ ಮೇಲೆ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಈ ವಿಷಯವನ್ನು ಮುಂದಿಟ್ಟು ವಿಧಾನಪರಿಷತ್‌ನಲ್ಲಿ ತೀವ್ರ ಕೋಲಾಹಲ ಉಂಟಾಗಿ, ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಜಂಟಿ ಅಧಿವೇಶನದ ಎರಡನೇ ದಿನವಾದ ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿದರು. ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮುಗಿಸಿ ಹೊರಟಿದ್ದ ರಾಜ್ಯಪಾಲರನ್ನು ತಡೆದು ಗೂಂಡಾಗಳ ರೀತಿಯಲ್ಲಿ ವರ್ತಿಸಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ ಎಂದು ಆರೋಪಿಸಿದರು. ಹೀಗಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ತಕ್ಷಣವೇ ಸದನದಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಸದಸ್ಯರು ಒಟ್ಟಿಗೆ ಎದ್ದು ನಿಂತು, ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು “ಶೇಮ್… ಶೇಮ್” ಎಂದು ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿದರು. ಕ್ರಿಯಾಲೋಪದ ಮೇಲೆ ಮಾತನಾಡಲು ಹರಿಪ್ರಸಾದ್ ಮುಂದಾದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗೂಂಡಾಗಿರಿ ವರ್ತನೆ ತೋರಿದ ಸದಸ್ಯರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಯಾವ ಶಿಕ್ಷೆ ನೀಡುತ್ತೀರಿ? ಮೊದಲು ಅದನ್ನು ಹೇಳಿ ಎಂದು ಪ್ರಶ್ನಿಸಿದರು. ಗದ್ದಲದ ನಡುವೆಯೇ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈ ಹಿಂದೆಯೂ ಹಂಸರಾಜ್ ಭಾರದ್ವಾಜ್ ಅವರು ರಾಜ್ಯಪಾಲರಾಗಿದ್ದಾಗ ಭಾಷಣ ಮಾಡದೆ ‘ನಾನು ಸರ್ಕಾರದ ಗುಲಾಮನಲ್ಲ’ ಎಂದು ಹೇಳಿ ಹೊರನಡೆದಿದ್ದರು. ಕಾನೂನುಬದ್ಧವಾಗಿ ಹೋರಾಟ ಮಾಡಲಿ, ಆದರೆ ಗೂಂಡಾಗಿರಿ ಸರಿಯಲ್ಲ. ರಾಜ್ಯಪಾಲರಿಗೆ ಅಪಮಾನವಾಗಿದೆ ಎಂದು ಹೇಳಿದರು.

ವರದಿ : ಲಾವಣ್ಯ ಅನಿಗೋಳ

About The Author