SSLC ಟಾಪರ್‌ಗಳಿಗೆ ₹50 ಸಾವಿರ

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದು ಗುಡ್ ನ್ಯೂಸ್. ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಲ್ಲ… ನೇರವಾಗಿ ₹50,000 ನಗದು ಪುರಸ್ಕಾರ ಸಿಗಲಿದೆ.

ಹೌದು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ, ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ, ಪ್ರತಿ ವಿದ್ಯಾರ್ಥಿಗೂ ₹50,000 ನಗದು ಪುರಸ್ಕಾರ ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಪುರಸ್ಕಾರವನ್ನು ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ ಕ್ರಿಯಾ ಯೋಜನೆಯಡಿ ನೀಡಲಾಗುತ್ತಿದೆ.

ರಾಜ್ಯದಾದ್ಯಂತ 785 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ. ಇದುವರೆಗೆ ಈ ಯೋಜನೆಯಡಿ ಜಿಲ್ಲೆ ಮತ್ತು ತಾಲ್ಲೂಕು ಎರಡೂ ಹಂತಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಆದರೆ, 2024–25ನೇ ಶೈಕ್ಷಣಿಕ ಸಾಲಿನಿಂದ ಈ ಲ್ಯಾಪ್‌ಟಾಪ್ ಪುರಸ್ಕಾರವನ್ನು ನಗದು ಬಹುಮಾನವಾಗಿ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಮೂಲಗಳ ಪ್ರಕಾರ, ಲ್ಯಾಪ್‌ಟಾಪ್‌ಗಿಂತ ನಗದು ಪುರಸ್ಕಾರ ನೀಡುವುದರಿಂದ ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ವೆಚ್ಚವನ್ನು ಬಳಸಿಕೊಳ್ಳಬಹುದು. ಉನ್ನತ ಶಿಕ್ಷಣ, ಕೋಚಿಂಗ್,
ಪುಸ್ತಕಗಳು, ಅಥವಾ ಇತರೆ ವಿದ್ಯಾಭ್ಯಾಸ ಸಂಬಂಧಿತ ಅಗತ್ಯಗಳಿಗೆ
ಈ ಹಣ ಸಹಾಯವಾಗಲಿದೆ ಎಂಬುದು ಸರ್ಕಾರದ ನಿಲುವು. ಇದು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೇರಣೆಯಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author