ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರವಿ ನಡುವೆ ತೀವ್ರ ಪೈಪೋಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಒಮ್ಮತ ಮೂಡಿಲ್ಲ. ಇದರ ಪರಿಣಾಮವಾಗಿ ಗುರುವಾರ ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಕೊನೇ ಕ್ಷಣದಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಕೆ.ಎನ್. ರಾಜಣ್ಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋದರ ಸಂಬಂಧಿ ಎಸ್. ರವಿ ನಡುವೆ ಪಟ್ಟು ಹಿಡಿದ ಸ್ಪರ್ಧೆ ನಡೆಯುತ್ತಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ನಡೆದ ಪ್ರಯತ್ನಗಳು ವಿಫಲವಾದವು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೈಕಮಾಂಡ್ ಪರವಾಗಿ ಮಧ್ಯಪ್ರವೇಶಿಸಿ, ಅಗತ್ಯವಿದ್ದರೆ ಇಬ್ಬರನ್ನೂ ಬಿಟ್ಟು ಬೇರೆ ಅಭ್ಯರ್ಥಿಗೆ ಅವಕಾಶ ನೀಡಿ. ಆದರೆ ಪಕ್ಷದ ಒಗ್ಗಟ್ಟು ಕದಡುವಂತಾಗಬಾರದು. ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚುನಾವಣಾ ಕಣದಲ್ಲಿ ಯಾರೂ ಇಲ್ಲದ ಕಾರಣ ಕೊನೇ ಕ್ಷಣದಲ್ಲಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಎರಡೂ ಬಣಗಳ ಸಂಘರ್ಷ ತಪ್ಪಿಸಿ, ಅವಿರೋಧ ಆಯ್ಕೆ ಸುಗಮಗೊಳಿಸಲು ಮುಂದೆ ಪಕ್ಷ ಕಾರ್ಯತಂತ್ರ ಹೆಣೆಯಲಿದೆ. ಅಗತ್ಯವಾದರೆ ಮೂರನೇ ವ್ಯಕ್ತಿಗೂ ಅವಕಾಶ ದೊರೆಯಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಒಟ್ಟು 21 ನಿರ್ದೇಶಕರ ಪೈಕಿ, ಮೈಸೂರು–ಚಾಮರಾಜನಗರ, ಬಾಗಲಕೋಟೆ ಮತ್ತು ಕೋಲಾರ DCC ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ 18 DCC ಬ್ಯಾಂಕುಗಳು ನಾಮನಿರ್ದೇಶಿತರನ್ನು ನಿಯೋಜಿಸಿವೆ. ಈ ಪೈಕಿ 15 ಮಂದಿ ಕಾಂಗ್ರೆಸ್ ಬೆಂಬಲಿಗರಾಗಿದ್ದು, ಇಬ್ಬರು ಬಿಜೆಪಿ ಕೊಡಗು-ಕೊಡಂದೇರ ಪಿ.ಗಣಪತಿ ಮತ್ತು ಚಿಕ್ಕಮಗಳೂರು- ಬೆಳ್ಳಿಪ್ರಕಾಶ್ ಮತ್ತು ಒಬ್ಬ ಜೆಡಿಎಸ್ ಅದು ಹಾಸನ– ಆರ್. ಸೂರಜ್ ಬೆಂಬಲಿತರಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದು ಖಚಿತವಾಗಿದೆ.
ವರದಿ : ಲಾವಣ್ಯ ಅನಿಗೋಳ




