ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ಬಲವನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ವರ್ಷವೇ 8,300 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ IGP ಡಾ. M.A. ಸಲೀಂ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಪಡೆ ದೇಶಕ್ಕೆ ಮಾದರಿಯಾಗಿದ್ದು, ಕಾಲಮಾನಕ್ಕೆ ತಕ್ಕಂತೆ ನೂತನ ಪೊಲೀಸಿಂಗ್ ವ್ಯವಸ್ಥೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಗುಪ್ತಚರ ವಿಭಾಗ ಸೇರಿದಂತೆ ಖಾಲಿಯಿರುವ ಪೊಲೀಸ್ ಪೇದೆಗಳು, ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಭರ್ತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದ ಆಂತರಿಕ ಭದ್ರತಾ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಗುಪ್ತಚರ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈಗಾಗಲೇ 100 ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಬ್ಬಂದಿ ಸೇರ್ಪಡೆಗೊಳ್ಳಲಿದ್ದಾರೆ ಎಂದರು. ಜತೆಗೆ ಹೊಸ ಪೀಳಿಗೆಯ ಪೊಲೀಸರಿಗೆ ನವೀನ ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಡಿಜಿ–ಐಜಿಪಿ ವಿವರಿಸಿದರು. ಪ್ರಮುಖ ಜಾತ್ರೆ ಹಾಗೂ ದೊಡ್ಡ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಎಐ ತಂತ್ರಜ್ಞಾನ ಬಳಕೆ, ಚಿಕ್ಕಬಳ್ಳಾಪುರದ ನಂದಿ ಬಳಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆ, ಡ್ರಗ್ಸ್ ಹಾವಳಿ ತಡೆಗೆ ಮಾದಕವಸ್ತು ವಿರೋಧಿ ಕಾರ್ಯಪಡೆ ಮೇಲ್ದರ್ಜೆಗೇರಿಕೆ ಬಗ್ಗೆ ಹೇಳಿದ್ರು
ಜೊತೆಗೆ ಒಂಟಿ ವೃದ್ಧರ ಸುರಕ್ಷತೆಗೆ ವಾರಕ್ಕೊಮ್ಮೆ ಮನೆಗೆ ಭೇಟಿ ನೀಡುವ ‘ಆಸರೆ’ ಯೋಜನೆ, ಸಂತ್ರಸ್ತ ಕೇಂದ್ರಿತ ನೆರವು ಯೋಜನೆಯಡಿ ಪ್ರತೀ ತಿಂಗಳ ಮೂರನೇ ಭಾನುವಾರ ಸಂತ್ರಸ್ತರ ಮನೆಗೆ ತೆರಳಿ ಸಾಂತ್ವನ ಕಾರ್ಯಕ್ರಮ, ರಾಜ್ಯದಲ್ಲಿ ಜನಸ್ನೇಹಿ ಹಾಗೂ ತಂತ್ರಜ್ಞಾನಾಧಾರಿತ ಪೊಲೀಸಿಂಗ್ ವ್ಯವಸ್ಥೆ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಡಾ. M.A ಸಲೀಂ ಸ್ಪಷ್ಟಪಡಿಸಿದರು.
ವರದಿ : ಲಾವಣ್ಯ ಅನಿಗೋಳ




