Political News: ಕೇಂದ್ರ ಬಜೆಟ್ ಹಾಡಿ ಹೊಗಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Political News: ಫೆಬ್ರವರಿ 1ರಂದು ನಡೆದಿದ್ದ ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅನ್ನದಾತರ ನೆರವಿಗೆ ನಿರಂತರ ಬದ್ಧ, ಬಜೆಟ್ ನಲ್ಲಿ ಐತಿಹಾಸಿಕ ಕ್ರಮಗಳ ಮೂಲಕ ಎನ್.ಡಿ.ಎ ಸರ್ಕಾರ ಸನ್ನದ್ಧ ಎಂದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ನೇತೃತ್ವದ ಎನ್‌.ಡಿ.ಎ ಸರ್ಕಾರದ ಬಜೆಟ್ 2026-27 ಅನ್ನು ಮಂಡಿಸಿದ ಸನ್ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಜೀ ರವರು, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ಮೀಸಲಿಡುವ ಮೂಲಕ ನಮ್ಮ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದೆ.

ಬಹಳ ಮುಖ್ಯವಾಗಿ, ತೆಂಗು, ಶ್ರೀಗಂಧ ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಈ ಬಜೆಟ್ ಹೊಸ ಆಯಾಮ ನೀಡಲಿದೆ. ನಮ್ಮ ರೈತರಿಗೆ ಹೆಚ್ಚಿನ ಅನುಕೊಲ ಒದಗಿಸುವ ಕೇಂದ್ರ ಸರ್ಕಾರದ ಈ ಕ್ರಮ ಅತ್ಯಂತ ಅಭಿನಂದನೀಯ ಎಂದು ಕೇಂದ್ರ ಬಜೆಟ್‌ನ್ನು ವಿಜಯೇಂದ್ರ ಬೆಂಬಲಿಸಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ನಮ್ಮ ರಾಜ್ಯಕ್ಕೆ ‘ತೆಂಗು ಪ್ರೋತ್ಸಾಹಕ ಯೋಜನೆ’ ವರದಾನವಾಗಲಿದೆ. ಹಳೆಯ ಮರಗಳ ಬದಲಿಗೆ ಹೊಸ ಸಸಿಗಳನ್ನು ನೆಟ್ಟು ಉತ್ಪಾದಕತೆ ಹೆಚ್ಚಿಸಲು ಇದು ಸಹಕಾರಿ.

ಕರಾವಳಿಯ ಗೋಡಂಬಿ ಮತ್ತು ಕೋಕೋ ಬೆಳೆಗಾರರಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಮತ್ತು 2030ರ ವೇಳೆಗೆ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಶ್ಲಾಘನೀಯ. ಜೊತೆಗೆ, ‘ಭಾರತ್-ವಿಸ್ತಾರ್’ (Bharat-VISTAAR) ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ರೈತರಿಗೆ ಅವರದ್ದೇ ಭಾಷೆಯಲ್ಲಿ ವೈಜ್ಞಾನಿಕ ಮಾಹಿತಿ ಸಿಗಲಿರುವುದು ಅಭೂತಪೂರ್ವ, ಕ್ರಾಂತಿಕಾರಿ ಹೆಜ್ಜೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕೇವಲ ಬೆಳೆಯಷ್ಟೇ ಅಲ್ಲದೆ, ಉಪಕಸುಬುಗಳಿಗೂ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. 20,000 ಪಶುಚಿಕಿತ್ಸಕರಿಗೆ ತರಬೇತಿ ಹಾಗೂ ಪಶುಸಂಗೋಪನಾ ವಲಯಕ್ಕೆ ಸಿಗಲಿರುವ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ನಮ್ಮ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲಿದೆ. ಮೀನುಗಾರಿಕೆಗಾಗಿ 500 ಜಲಮೂಲಗಳ ಅಭಿವೃದ್ಧಿ ಕರಾವಳಿ ಮತ್ತು ಒಳನಾಡು ಮೀನುಗಾರರಿಗೆ ಹೊಸ ಭರವಸೆ ನೀಡಿದೆ.

ರಾಜ್ಯದ ಹಾಗು ದೇಶದ ನಮ್ಮ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ಶ್ರೀ ಮೋದಿ ಜೀ ರವರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ರೈತ ಬಾಂಧವರ ಪರವಾಗಿ ಅನಂತ ಧನ್ಯವಾದಗಳು ಎಂದು ವಿಜಯೇಂದ್ರ ಹೇಳಿದ್ದಾರೆ.

About The Author