ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಹಲವು ಸಿಹಿ ಸುದ್ದಿಗಳು

 

2026-2027ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹಲವು ಸಿಹಿ ಸುದ್ದಿಗಳು ಸಿಕ್ಕಿವೆ. ಮುಖ್ಯವಾಗಿ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಔಷಧಿಗಳ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ, ಕೆಲವು ಆಮದು ವಸ್ತುಗಳ ಮೇಲಿನ ಸುಂಕವನ್ನು ಏರಿಕೆ ಮಾಡಿರುವುದರಿಂದ ಕೆಲವೊಂದು ವಸ್ತುಗಳು ದುಬಾರಿಯಾಗಲಿವೆ.

ನಂಬರ್‌ 1 : ಸ್ಮಾರ್ಟ್‌ಫೋನ್ ಬೆಲೆ ಇಳಿಕೆ

ಸ್ಮಾರ್ಟ್‌ಫೋನ್ ಪ್ರಿಯರಿಗೆ ಇದು ಶುಭ ಸುದ್ದಿ. ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಬಿಡಿಭಾಗಗಳು, PCBA ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನುಕಡಿತಗೊಳಿಸಲಾಗಿದೆ. ಇದರಿಂದ ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಮೊಬೈಲ್ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.

ನಂಬರ್‌ 2 : ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿ

ಆರೋಗ್ಯ ಕ್ಷೇತ್ರಕ್ಕೂ ದೊಡ್ಡ ರಿಲೀಫ್ ಸಿಕ್ಕಿದೆ. ಕ್ಯಾನ್ಸರ್ ಮತ್ತು ಡಯಾಬಿಟಿಸ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ 17 ಬಗೆಯ ಜೀವ ರಕ್ಷಕ ಔಷಧಿಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಲಾಗಿದೆ. ಇದರಿಂದ ದುಬಾರಿ ಔಷಧಿಗಳು ಮತ್ತು ಮೆಡಿಕಲ್ ಉಪಕರಣಗಳ ಬೆಲೆ ಕಡಿಮೆಯಾಗಿ ರೋಗಿಗಳಿಗೆ ನೆರವಾಗಲಿದೆ.

ನಂಬರ್‌ 3: ಕ್ರೀಡಾಪಟುಗಳು, ಮೀನುಗಾರರಿಗೆ ಬಂಪರ್!

ಕ್ರೀಡೆಗೆ ಉತ್ತೇಜನ ನೀಡಲು ಸ್ಪೋರ್ಟ್ಸ್ ಸಾಮಗ್ರಿಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇನ್ನು ಮೀನುಗಾರರಿಗೆ ಅನುಕೂಲವಾಗಲು ಸೀಗಡಿ ಅಥವಾ ಚೆಮ್ಮೀನ್ ಆಹಾರ ಮತ್ತು ಸಂಸ್ಕರಣೆಗೆ ಬಳಸುವ ವಸ್ತುಗಳ ಮೇಲಿನ ಸುಂಕವನ್ನ ಕಡಿತ ಮಾಡಲಾಗಿದೆ. ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನೂ ಇಳಿಸಲಾಗಿದೆ.

ನಂಬರ್‌ 4: ಸೋಲಾರ್, ಇವಿ ವಾಹನಗಳ ಬೆಲೆ ಇಳಿಕೆ

ಪರಿಸರ ಸ್ನೇಹಿ ವಾಹನಗಳನ್ನ ಉತ್ತೇಜಿಸಲು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಬೇಕಾದ ಲಿಥಿಯಂ ಮತ್ತು ಇತರೆ ಕಚ್ಚಾ ವಸ್ತುಗಳ ಮೇಲಿನ ಸುಂಕ ವಿನಾಯಿತಿಯನ್ನ ಮುಂದುವರಿಸಲಾಗಿದೆ. ಸೋಲಾರ್ ಪ್ಯಾನಲ್ ತಯಾರಿಕೆಗೆ ಬಳಸುವ ಸೋಲಾರ್ ಗ್ಲಾಸ್ ಕಚ್ಚಾ ವಸ್ತುಗಳೂ ಅಗ್ಗವಾಗಿವೆ. ಮೈಕ್ರೋವೇವ್ ಓವನ್‌ನ ಬಿಡಿಭಾಗಗಳ ಮೇಲಿನ ಸುಂಕವನ್ನೂ ಇಳಿಸಲಾಗಿದೆ.

ನಂಬರ್‌ 5: ವಿದೇಶಿ ವಸ್ತುಗಳ ಮೇಲೆ ತೆರಿಗೆ ಏರಿಕೆ

ಒಂದೆಡೆ ಇಳಿಕೆ ಇದ್ರೆ ಇನ್ನೊಂದೆಡೆ ಏರಿಕೆ ಮಾಡಿದೆ. ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು ಮತ್ತು ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡಲು ವಿದೇಶದಿಂದ ಬರುವ ಕೆಲವು ಸಿದ್ಧ ವಸ್ತುಗಳ ಮೇಲೆ ತೆರಿಗೆ ಬರೆ ಎಳೆಯಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author