ನವದೆಹಲಿ: ʼMSP ಅಂದರೆ ʼಮಿನಿಮಮ್ ಸಪೋರ್ಟ ಪ್ರೈಸ್ʼ ಎಂಬ ತಪ್ಪಾಭಿಪ್ರಾಯವಿದೆ. ಆದರೆ ಅದಲ್ಲ, MSP ಅಂದರೆ ʼಮಿನಿಮಮ್ ಸೆಲ್ಲಿಂಗ್ ಪ್ರೈಸ್ (ಕನಿಷ್ಠ ಮಾರಾಟ ಬೆಲೆ). MSPಗೂ ಮತ್ತು FRPಗೂ ಯಾವುದೇ ರೀತಿ ಸಂಬಂಧವಿಲ್ಲʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವರು, MSPಗೂ ಮತ್ತು ಕಬ್ಬಿನ ಬೆಲೆಗೂ ಯಾವುದೇ ರೀತಿ ಸಂಬಂಧವಿಲ್ಲ. MSP ಸಕ್ಕರೆಗೆ ಅನ್ವಯಿಸುವಂಥದ್ದು, FRP ಕಬ್ಬಿಗೆ ಅನ್ವಯಿಸುತ್ತದೆ. ಸಕ್ಕರೆ ಕಾರ್ಖಾನೆಗಳು ಯಾವುದೇ ಕಾರಣಕ್ಕೂ MSPಗಿಂತ ಕಡಿಮೆ ಬೆಲೆಗೆ ಸಕ್ಕರೆ ಮಾರುವಂತಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 2018ರಲ್ಲಿ ಕೇಂದ್ರ ಸರ್ಕಾರ MSP ಜಾರಿಗೊಳಿಸಿದೆ. ಅಂತೆಯೇ ಇದೀಗ ಸಕ್ಕರೆ MSP ದರ ₹31 ಇದೆ. ಪ್ರಸ್ತುತ ಸಕ್ಕರೆ ಕನಿಷ್ಠ̇ಮಾರಾಟ ₹47 ಬೆಲೆಗಾಗಿದೆ. ಸಕ್ಕರೆ ಕಾರ್ಖಾನೆಗಳವರು ಯಾರೂ ₹31ರ ಕನಿಷ್ಠ ಬೆಲೆಗೆ ಮಾರಿರುವುದಿಲ್ಲ. ₹40ರಿಂದ ₹47ಕ್ಕೆ ಮಾರಾಟ ನಡೆದಿದೆ. ಮಧ್ಯದಲ್ಲಿ ₹63ಕ್ಕೂ ಮಾರಿದ್ದಾರೆ ಎಂದು ತಿಳಿಸಿದರು.
ಈಗ ಯಾರೂ X ಮಿಲ್ ದರದಲ್ಲಿ ಮಾರುವಂತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ₹31 ರೂಪಾಯಿಗೆ ಯಾರೂ ಮಾರಾಟ ಮಾಡುತ್ತಿಲ್ಲ. ಕಳೆದ ವರ್ಷ ₹38-39 ರೂಪಾಯಿಗೆ ಮಾರುತ್ತಿದ್ದರು. ಈ ವರ್ಷ ₹40ರಿಂದ ₹47 ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಸಚಿವರು ವಿವರಿಸಿದರು.
ಅ.12ಕ್ಕೆ ಸಭೆ ನಿರೀಕ್ಷೆ: ಕರ್ನಾಟಕದ ಕಬ್ಬು ಬೆಳೆಗಾರರ ಹೋರಾಟಕ್ಕೆ ತ್ವರಿತವಾಗಿ ಸ್ಪಂದಿಸಿರುವ ಸಚಿವರು, ಕೇಂದ್ರ ಸರ್ಕಾರ ಈ ವರ್ಷವೂ FRP ಹೆಚ್ಚಳ ಮಾಡುತ್ತದೆ ಎಂದಿದ್ದಲ್ಲದೆ, ಅತಿ ಶೀಘ್ರವೇ ಅಂದರೆ ಇದೇ ಅಕ್ಟೋಬರ್ 12ರಂದು ಸಭೆ ಸೇರುವ ನಿರೀಕ್ಷೆಯಿದೆ ಎಂಬ ಸಿಹಿ ಸುದ್ದಿ ಸಹ ನೀಡಿದರು.
ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಕ್ತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಬಹುತೇಕ ಅಕ್ಟೋಬರ್ 12ರಂದು ಸಭೆ ಸೇರಲು ರೈತ ಮುಖಂಡರೂ ಒಪ್ಪಿದ್ದಾರೆಂಬ ಮಾಹಿತಿಯಿದೆ. ಅಂದು ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಪರಿಹಾರಕ್ಕೆ ಸಮಗ್ರ ಚರ್ಚೆ ನಡೆಸಲಾಗುತ್ತದೆ ಎಂದರು.
ಕಬ್ಬು ಬೆಳೆಗಾರರು ಮಳೆ-ಬಿಸಿಲಲ್ಲಿ ಹೋರಾಟ ಮಾಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯಾವತ್ತೂ ತಮ್ಮ ಜತೆಗಿದೆ. ರೈತರ ಮತ್ತು ಸಕ್ಕರೆ ಕಾರ್ಖಾನೆಗಳ ಸಬಲತೆಗೆ ಸದಾ ಬೆಂಬಲ ನೀಡುತ್ತಲೇ ಇದ್ದು ಅದೇನೇ ಸಮಸ್ಯೆಗಳಿದ್ದರೂ ಪರಿಹರಿಸುತ್ತೇವೆ. ರೈತ ಮುಖಂಡರು ದೆಹಲಿಗೆ ಬಂದು ಮುಕ್ತ ಚರ್ಚೆಯಲ್ಲಿ ಭಾಗಿಯಾಗಲಿ ಎಂದೂ ಇದೇ ವೇಳೆ ಆಹ್ವಾನಿಸಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಯಾವತ್ತೂ ರೈತಪರ ನಿಲುವುಗಳನ್ನೇ ತೆಗೆದುಕೊಂಡಿದೆ. ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ MSP, FRP ಮಾತ್ರವಲ್ಲ; ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲತೆಗೂ ಮುತುವರ್ಜಿ ವಹಿಸಿದೆ. ಎಥೆನಾಲ್ ಉತ್ಪಾದನೆ-ಖರೀದಿಗೆ ಉತ್ತೇಜನ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಬರೋಬ್ಬರಿ̇₹16600 ಕೋಟಿ ಬಾಕಿ ಪಾವತಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಲೇ ಯುಪಿಎ ಆಡಳಿತದಲ್ಲಿ ಕಬ್ಬು ಬೆಳೆಗಾರರಿಗೆ ಬರಬೇಕಿದ್ದ ₹16600 ಕೋಟಿ ಬಾಕಿ ಪಾವತಿಗೆ ದಿಟ್ಟ ಹೆಜ್ಜೆಯಿರಿಸಿತು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಿತು. ಅನೇಕ ಸುಧಾರಣಾ ಕ್ರಮಗಳನ್ನು ಅನುಸರಿಸಿತು ಎಂದು ಹೇಳಿದರು.
2014ಕ್ಕೂ ಮೊದಲು ಯುಪಿಎ ಕಾಲದಲ್ಲಿ ರೈತರು ಕಬ್ಬಿನ ಬಾಬ್ತು ಹಣ ಪಡೆಯಲು ವರ್ಷಗಟ್ಟಲೇ ಕಾಯಬೇಕಿತ್ತು. ಮಾತ್ರವಲ್ಲ, ಸಕ್ಕರೆ ಕಾರ್ಖಾನೆಗಳು ಎಕ್ಸ್ ಮಿಲ್ ಪ್ರೈಸ್ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ಉಳಿದ ಸಕ್ಕರೆ ಕಾರ್ಖಾನೆಗಳಿಗೆ ಮತ್ತು ಕಬ್ಬು ಬೆಳೆಗಾರರಿಗೆ ತೀವ್ರ ತೊಂದರೆ ಆಗುತ್ತಿತ್ತು. ಪ್ರಧಾನಿ ಮೋದಿ ಅವರು ಇದನ್ನೆಲ್ಲ ನಿವಾರಿಸಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತ ಕಾಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡರು ಎಂದು ವಿವರಿಸಿದರು.
ಈ ವರ್ಷವೂ FRP ಹೆಚ್ಚಳ ಆಗುತ್ತದೆ: ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ MSP ಜತೆ FRPಯನ್ನೂ ಜಾರಿ ತಂದಿದ್ದು, ರೈತರಿಗೆ ಅನುಕೂಲವಾಗಲೇಂದೇ ಪ್ರತಿ ವರ್ಷವೂ FRP ಹೆಚ್ಚಳ ಮಾಡಲಾಗುತ್ತಿದೆ. 2026ರ ಮೇ ತಿಂಗಳಲ್ಲಷ್ಟೇ ₹365ಕ್ಕೆ ಹೆಚ್ಚಿಸಿದ್ದು, ಈ ವರ್ಷವೂ ಮತ್ತೆ ಹೆಚ್ಚಳ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.
ರೈತರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಯಾವತ್ತೂ ತಮ್ಮ ಬೆನ್ನಿಗಿದೆ. ರೈತ ಮುಖಂಡರು ದೆಹಲಿಗೆ ಬಂದರೆ ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳು ಮತ್ತು ಉನ್ನತ ಅಧಿಕಾರಿಗಳ ಜತೆ ಕುಳಿತು ಚರ್ಚಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಫಲಪ್ರದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಮತ್ತು ಸಮಸ್ಯೆಗಳ ನಿವಾರಣೆಗೆ ಕೃಷಿ ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ, ಹಾಗೂ ರೈತ ಮುಖಂಡರು ಹಾಗೂ ರಾಜ್ಯ ಸರ್ಕಾರವೂ ಒಳಗೊಂಡಂತೆ ಮಹತ್ತರ ಚರ್ಚೆ ನಡೆಸಿ ತೀರ್ಮಾನಿಸಬೇಕಾಗುತ್ತದೆ. ಇದಕ್ಕೆ ತಾವು ಸಿದ್ಧವಿದ್ದು, ರೈತ ಮುಖಂಡರು ದೆಹಲಿಗೆ ಬರಲಿ. ಅತ್ಯಂತ ಗೌರವಾದರಿಂದ ಬರಮಾಡಿಕೊಂಡು ಅವರ ಸಮ್ಮುಖದಲ್ಲೇ ಸಮಸ್ಯೆ ಪರಿಹಾರಕ್ಕೆ ಮುಕ್ತ ಚರ್ಚೆ ನಡೆಸಿ ಅನುಕೂಲಕರ ತೀರ್ಮಾನವನ್ನೇ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಜೋಶಿ ತಿಳಿಸಿದರು.
ರೈತರೇ ತಮ್ಮ ಮೊದಲ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೇ ಮೊದಲ ಆದ್ಯತೆ ನೀಡುತ್ತದೆ. ಸಕ್ಕರೆ ಕಾರ್ಖಾನೆಗಳು ಮತ್ತು ಗ್ರಾಹಕರಿಗೆ ಎರಡನೇ ಆದ್ಯತೆ. ಹೀಗೆ ಸರ್ವರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಯಾವತ್ತೂ ಬದ್ಧವಾಗಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಮತ್ತು ಗ್ರಾಹಕರ ಹಿತ ಕಾಯುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ರೈತಪರ ನಿಲುವು: 2026ರ ಫೆಬ್ರವರಿಯಲ್ಲಿ ರೈತರು ತಮ್ಮನ್ನು ಭೇಟಿ ಮಾಡಿ FRP ಹೆಚ್ಚಳಕ್ಕೆ ಒತ್ತಾಯಿಸಿದ್ದರು. ಅಂತೆಯೇ ಕೇಂದ್ರ ಸರ್ಕಾರದ ಗಮನ ಸೆಳೆದು̇₹365ಕ್ಕೆ ಹೆಚ್ಚಿಸಲಾಗಿತ್ತು. ಈ ಹಿಂದಿನ ಸರ್ಕಾರ ಕೇವಲ ಪೈಸೆ ಲೆಕ್ಕದಲ್ಲಿ ಹೆಚ್ಚಳ ಮಾಡುತ್ತಿತ್ತು. ಆದರೆ, NDA ಸರ್ಕಾರ ₹30-40 ಹೆಚ್ಚಳ ಮಾಡಿದೆ. ರೈತರು ಇದೀಗ ಮತ್ತೆ ಈ ಬಗ್ಗೆ ಬೇಡಿಕೆಯಿಡುತ್ತಿದ್ದಾರೆ. ಬೆಲೆ ನಿಗದಿ ಸಮಿತಿ, ಕೇನ್ ಕಮಿಷನರ್ ಹಾಗೂ ರಾಜ್ಯ ಸರ್ಕಾರದ ಶಿಫಾರಸ್ಸು ಗಣನೆಗೆ ತೆಗೆದುಕೊಂಡು FRP ಹೆಚ್ಚಳ ಕುರಿತಂತೆ ರೈತಪರ ನಿಲುವು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಮತ್ತು ಗ್ರಾಹಕರ ಸಂತೃಪ್ತಿ ಎಲ್ಲವನ್ನೂ ಸಮತೋಲನವಾಗಿ ನೋಡಿ ಕ್ರಮ ಕೈಗೊಳ್ಳುತ್ತಿದೆ. ಆದರೆ, ಕೆಲವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದ ಸಚಿವರು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಬಲತೆಗಾಗಿಯೇ ತಮ್ಮ ಸರ್ಕಾರ ಎಥೆನಾಲ್‌ಗೆ ಉತ್ತೇಜನ ನೀಡಿದೆ. ಸಕ್ಕರೆ ಕಾರ್ಖಾನೆಗಳಿಂದಲೇ ಹೆಚ್ಚಿನ ಎಥೆನಾಲ್ ಖರೀದಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
1200 ಕೋಟಿ ಲೀಟರ್ ಎಥೆನಾಲ್ ಖರೀದಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿಯಿಂದ ಎಥೆನಾಲ್ ಉತ್ಪಾದನೆಗೆ ಒತ್ತು ನೀಡಿದ್ದು, ಕೇವಲ 38 ಕೋಟಿ ಲೀಟರ್ ಇದ್ದ ಎಥೆನಾಲ್ ಖರೀದಿಯನ್ನು ಇದೀಗ ಐತಿಹಾಸಿಕ ಎನ್ನುವಂತೆ 1200 ಕೋಟಿ ಲೀಟರ್‌ಗೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಕಬ್ಬು ಬೆಳೆಗಾರರಿಗೆ ಒಂದು ತಿಂಗಳಿನಲ್ಲೇ ಹಣ ಪಾವತಿಯಾಗುತ್ತಿದೆ. ವರ್ಷಗಟ್ಟಲೇ ಕಾಯುವುದನ್ನು ತಪ್ಪಿಸಿದ ಹೆಗ್ಗಳಿಕೆ ಮೋದಿ ಸರ್ಕಾರದ್ದಾಗಿದೆ. ಕಳೆದ ವರ್ಷ ಶೇ.100ರಷ್ಟು ಪಾವತಿ ಆಗಿದ್ದರೆ, ಈ ವರ್ಷ ಆಗಲೇ ಶೇ.97ರಷ್ಟು ಹಣ ಪಾವತಿಯಾಗಿದೆ ಎಂದು ತಿಳಿಸಿದರು.
ಎಥೆನಾಲ್ ಅನ್ನು ಸಕ್ಕರೆ ಕಾರ್ಖಾನೆಗಳು ಮಾತ್ರವಲ್ಲದೆ, ಬೇರೆ ಮೂಲಗಳಿಂದಲೂ ಉತ್ಪಾದಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮೊದಲು ಸಕ್ಕರೆ ಕಾರ್ಖಾನೆಗಳ ಎಥೆನಾಲ್ ಅನ್ನು ಅಷ್ಟೂ ಖರಿದಿಸುತ್ತಿದೆ. ಬಳಿಕ ಇತರೆ ಮೂಲಗಳಿಂದ ತಯಾರಿಸುವ ಎಥೆನಾಲ್ ಖರೀದಿಗೆ ಆದ್ಯತೆ ನೀಡಿದೆ. ಇದು ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ಆರ್ಥಿಕ ಶಕ್ತಿ ತುಂಬುತ್ತಿದೆ ಎಂದರು.
SAP ತರಲಿ ರಾಜ್ಯ ಸರ್ಕಾರ: ಕಬ್ಬಿನ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕಾನೂನಾತ್ಮಕವಾಗಿಯೇ ಮುಕ್ತ ಅವಕಾಶ ನೀಡಿದೆ. ಕೇಂದ್ರ ಸರ್ಕಾರ FRP ಮಾಡಿದಂತೆ ಕರ್ನಾಟಕ ಸರ್ಕಾರವೂ SAP ತರಲಿ ಎಂದು ಸಲಹೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ ಸರ್ಕಾರಗಳು ಮಾಡಿವೆ. ಕರ್ನಾಟಕ ಸರ್ಕಾರದಿಂದೇಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.
ಪೆಟ್ರೋಲ್, ಡಿಸೇಲ್, ವಿದ್ಯುತ್ ಹೀಗೆ ಪ್ರತಿಯೊಂದರ ಬೆಲೆಯನ್ನೂ ಹೆಚ್ಚಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಕಬ್ಬಿಗೇಕೆ ಬೆಲೆ ಹೆಚ್ಚಳ ಮಾಡುತ್ತಿಲ್ಲ? ದೆಹಲಿ ಮತ್ತು ರಾಜ್ಯದಲ್ಲಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದಕ್ಕೆ ಉತ್ತರಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.
ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಬಾಬ್ತು ಇದ್ದ ₹5 ಲಕ್ಷ ಶುಲ್ಕವನ್ನು ಬರೊಬ್ಬರಿ 1 ಕೋಟಿಗೆ ಏರಿಕೆ ಮಾಡಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಹೊರೆಯಾಗಿದೆ. SAP ಮಾಡುವ ಧೈರ್ಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಹೇಳಿದರು.




